ರಾಯಚೂರು: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಸತ್ಸಂಗದಲ್ಲಿ ಕಾಲ್ತುಳಿತದಿಂದಾಗಿ ಸಾವು-ನೋವುಗಳು ಉಂಟಾಗಿರುವುದಕ್ಕೆ ಖೇದ ವ್ಯಕ್ತಪಡಿಸುತ್ತೇವೆ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದ್ದಾರೆ.
ದೇವದುರ್ಗ ತಾಲೂಕಿನ ಗಬ್ಬೂರಿನ ಬೂದಿ ಬಸವ ಮಠದಲ್ಲಿ ಇಂದು ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಧಾರ್ಮಿಕ ಕಾರ್ಯಕ್ರಮಗಳಿಗೆ ಜನರು ಭಕ್ತಿಯಿಂದ ಆಗಮಿಸುತ್ತಾರೆ. ಹತ್ರಾಸ್‌ನ ಸತ್ಸಂಗದಲ್ಲಿ ನೂರಾರು ಜನ ಮರಣ ಹೊಂದಿದ್ದಾರೆ. ಅವರ ಭಾವನೆಗಳಿಗೆ ಗೌರವ ಕೊಡುವಂಥದ್ದು, ಭಕ್ತರ ಸುರಕ್ಷತೆಯ ವ್ಯವಸ್ಥೆ ಮಾಡುವುದು ಕಾರ್ಯಕ್ರಮದ ಆಯೋಜಕರ ಜವಾಬ್ದಾರಿ. ರಕ್ಷಣೆಯ ಕೊರತೆಯಿಂದ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇವೆ. ಇಂಥ ದುರ್ಘಟನೆ ಮರುಕಳಿಸದಂತೆ ಧಾರ್ಮಿಕ ಸಂಘ ಸಂಸ್ಥೆಗಳು ಜವಾಬ್ದಾರಿವಹಿಸಬೇಕು ಎಂದರು.
ರಾಜ್ಯದಲ್ಲಿ ಸರಣಿ ಕೊಲೆಗಳು, ಕ್ರೂರವಾದ ಕಗ್ಗೊಲೆಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಹಳಷ್ಟು ಆಘಾತಕಾರಿ ಬೆಳವಣಿಗೆಗಳು ನಡೆದಿವೆ. ಕಾನೂನಿನಡಿ ಕಠಿಣ ಕ್ರಮ ತೆಗೆದುಕೊಳ್ಳದೇ ಇರುವುದೇ ಇದಕ್ಕೆ ಕಾರಣ. ಎಷ್ಟೇ ಪ್ರತಿಷ್ಠಿತ ವ್ಯಕ್ತಿಯಾದರೂ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಕಠಿಣ ಶಿಕ್ಷಣ ನೀಡಬೇಕು. ಬಹಳಷ್ಟು ಪ್ರಚಾರದಲ್ಲಿರುವ ವ್ಯಕ್ತಿಗಳು ಇಂಥ ದುಷ್ಕೃತ್ಯಕ್ಕೆ ಕೈ ಹಾಕಿರುವುದು ಬೇಸರ ತರಿಸುತ್ತಿದೆ ಎಂದು ಹೇಳಿದರು.