ಕರ್ನಾಟಕ

karnataka

ETV Bharat / state

ವೇಸ್ಟ್ ಹೂವಿನಿಂದ ಅಗರಬತ್ತಿ ತಯಾರಿಕೆ: ಮಂಗಳೂರಿನ 'ಸಾನಿಧ್ಯ' ವಸತಿ ಶಾಲೆ ವಿಶೇಷಚೇತನರ ಕೌಶಲ್ಯ - AGARBATTI FROM WASTE FLOWER PETAL

ಮಂಗಳೂರಿನ 'ಸಾನಿಧ್ಯ' ವಸತಿ ಶಾಲೆಯಲ್ಲಿ ವಿಶೇಷಚೇತನ ವಿದ್ಯಾರ್ಥಿಗಳು ತ್ಯಾಜ್ಯ ಹೂವನ್ನು ಒಣಗಿಸಿ, ಹುಡಿ ಮಾಡಿ ಅಗರಬತ್ತಿ ತಯಾರಿಸುತ್ತಿದ್ದಾರೆ. ಈ ಕುರಿತು 'ಈಟಿವಿ ಭಾರತ್'​ ಪ್ರತಿನಿಧಿ ವಿನೋದ್ ಪುದು ನೀಡಿರುವ ವಿಶೇಷ ವರದಿ ಇಲ್ಲಿದೆ.

ತ್ಯಾಜ್ಯ ಹೂವಿನಿಂದ ಅಗರಬತ್ತಿ ತಯಾರಿಸುವ 'ಸಾನಿಧ್ಯ' ವಿಶೇಷ ಚೇತನರು
ತ್ಯಾಜ್ಯ ಹೂವಿನಿಂದ ಅಗರಬತ್ತಿ ತಯಾರಿಸುವ 'ಸಾನಿಧ್ಯ' ವಿಶೇಷಚೇತನರು (ETV Bharat)

By ETV Bharat Karnataka Team

Published : Nov 20, 2024, 9:31 AM IST

Updated : Nov 20, 2024, 9:39 AM IST

ಮಂಗಳೂರು:ದೀಪಾವಳಿ ಸಂದರ್ಭದಲ್ಲಿ ಹಣತೆಗಳನ್ನು ತಯಾರಿಸಿ ಮೆಚ್ಚುಗೆಗಳಿಸಿದ್ದ ಮಂಗಳೂರಿನ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳು ತ್ಯಾಜ್ಯ​​ ಹೂವಿನಿಂದ ಅಗರಬತ್ತಿ ತಯಾರಿಸುವ ಕಾರ್ಯ ಮಾಡುತ್ತಿದ್ದಾರೆ.

ಮಂಗಳೂರಿನ ಶಕ್ತಿನಗರದಲ್ಲಿರುವ ಈ ವಿಶೇಷ ಮಕ್ಕಳ ಶಾಲೆಯಲ್ಲಿ ಇರುವ 200 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ವೇಸ್ಟ್ ಹೂವಿನಿಂದ ಅಗರಬತ್ತಿ ತಯಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಲ್ಲರೂ 21 ವರ್ಷ ಮೇಲ್ಪಟ್ಟ ವಿಶೇಷಚೇತನ ಮಕ್ಕಳು. ಇವರು ಈ ಕಾರ್ಯದಲ್ಲಿ ಪರಿಣತಿ ಹೊಂದಿದ್ದು, ದುಡಿಮೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮಂಗಳೂರಿನ 'ಸಾನಿಧ್ಯ' ವಸತಿ ಶಾಲೆ ವಿಶೇಷಚೇತನರ ವಿಶೇಷ ಕೌಶಲ್ಯ (ETV Bharat)

ವಸತಿ ಶಾಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಅಗರಬತ್ತಿ ತಯಾರಿಕೆ ನಡೆಯುತ್ತಿದೆ. ಇಲ್ಲಿನ ನಾಲ್ಕು ಶಿಕ್ಷಕರು ಮೊದಲಿಗೆ ಬೆಂಗಳೂರಿಗೆ ತೆರಳಿ ಅಲ್ಲಿ ಕ್ರಾಫ್ಟಿಂಜನ್ ಫೌಂಡೇಶನ್​ನಿಂದ ತರಬೇತಿ ಪಡೆದಿದ್ದರು. ಬಳಿಕ ಅವರು ವಿಶೇಷಚೇತನ ಮಕ್ಕಳಿಗೆ ಇದರ ತರಬೇತಿ ನೀಡಿದ್ದಾರೆ. ಅಗರಬತ್ತಿ ತಯಾರಿಗಾಗಿ ಹೂವಿನ ದಳಗಳಿಂದ ಹುಡಿಯನ್ನು ಮಾಡಲು ಮತ್ತು ಅಗರಬತ್ತಿ ತಯಾರಿಸಲು ಯಂತ್ರಗಳನ್ನು ಅಳವಡಿಸಲಾಗಿದೆ.

ಸಾನಿಧ್ಯ ವಸತಿ ಶಾಲೆಯು ದೇವಸ್ಥಾನ, ಸಮಾರಂಭ, ಮಾರ್ಕೆಟ್​​ಗಳಲ್ಲಿ ಬಳಸಿದ ಮತ್ತು ಉಳಿದ ಹೂವನ್ನು ತರುತ್ತಾರೆ. ಹೂವನ್ನು ಪ್ರತ್ಯೇಕಿಸಿ ಅದರಿಂದ ಎಸಳು ತೆಗೆಯುತ್ತಾರೆ. ಈ ಎಸಳನ್ನು ನೆರಳಿನಲ್ಲಿ ಒಂದು ವಾರ ಒಣಗಿಸುತ್ತಾರೆ. ಅದನ್ನು ಬಳಿಕ ಯಂತ್ರದ ಮೂಲಕ ಹುಡಿ ಮಾಡುತ್ತಾರೆ. ಈ ಹೂವಿನ ಹುಡಿಯನ್ನು, ಇನ್ನೊಂದು ರೆಡಿ ಹುಡಿಯೊಂದಿಗೆ ಮಿಶ್ರಣ ಮಾಡಿ, ಅದಕ್ಕೆ ನೀರನ್ನು ಹಾಕಿ ಅದನ್ನು ಮೆದುಗೊಳಿಸಿ ಅಗರಬತ್ತಿ ತಯಾರಿಸುವ ಯಂತ್ರಕ್ಕೆ ಹಾಕುತ್ತಾರೆ. ಅಲ್ಲಿ ವಿದ್ಯಾರ್ಥಿಗಳು ಅಗರಬತ್ತಿ ತಯಾರಿಸುತ್ತಾರೆ.‌ ಬಳಿಕ ಅದನ್ನು ಪ್ಯಾಕ್ ಮಾಡಿ ಕಳುಹಿಸಲಾಗುತ್ತದೆ. ಹೂವಿನ ದಳಗಳನ್ನು ಒಣಗಿಸುವುದರಿಂದ ಅಗರಬತ್ತಿ ತಯಾರಿಸಿ ಪ್ಯಾಕ್​ ಮಾಡುವ ತನಕ ವಿಶೇಷ ಚೇತನರು ಕಾರ್ಯನಿರ್ವಹಿಸುತ್ತಾರೆ. ಈ ಮೂಲಕ ಅವರ ಕೌಶಲ್ಯ ಅನಾವರಣಗೊಳ್ಳುತ್ತಿದೆ.

ಈ ಬಗ್ಗೆ ಮಾತನಾಡಿದ ಸಾನಿಧ್ಯ ಶಾಲೆಯ ಶಿಕ್ಷಕಿ ಅಕ್ಷತಾ, "ಹೂವಿಗೆ ದಳಗಳನ್ನು ತಯಾರಿಸಲು 5-10 ಮಕ್ಕಳು, ಹೂವಿನ ಪುಡಿ ಮಾಡಲು 3-4 ಮಕ್ಕಳು, ಅಗರಬತ್ತಿಗೆ ಹಿಟ್ಟನ್ನು ತಯಾರಿಸಲು 2 ಮಕ್ಕಳು ಮತ್ತು ಅಗರಬತ್ತಿಯ ಪುಡಿ ಮಾಡಲು 3-4 ಮಕ್ಕಳು ಇದ್ದಾರೆ. ಒಟ್ಟು 20 ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಂಡಿದ್ದೇವೆ. ಕಳೆದ 3-4 ತಿಂಗಳಿಂದ ನಾವು ಇದನ್ನು ಮಾಡುತ್ತಿದ್ದೇವೆ. ನಾವು ಹಲವು ಅಗರಬತ್ತಿಗಳಿಗೆ ಆರ್ಡರ್ ಪಡೆದಿದ್ದೇವೆ. ಬೆಂಗಳೂರು ಕೇಂದ್ರದಿಂದ 2,500 ಅಗರಬತ್ತಿಗಳಿಗೆ ಆರ್ಡರ್ ಬಂದಿತ್ತು. ಈ ಕಾರ್ಯ ಅವರಿಗೆ ಚಿಕಿತ್ಸೆ ಇದ್ದಂತೆ. ಈ ಕೌಶಲ್ಯಗಳು ಅವರನ್ನು ಸುಧಾರಿಸುತ್ತವೆ" ಎಂದು ತಿಳಿಸಿದ್ದಾರೆ.

ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್​ ಶೆಟ್ಟಿ ಮಾತನಾಡಿ, "ಸಾನಿಧ್ಯ 2003ರಲ್ಲಿ ಪ್ರಾರಂಭವಾಯಿತು. ಪ್ರಸ್ತುತ ನಮ್ಮ ಸಂಸ್ಥೆಯಲ್ಲಿ ಸುಮಾರು 202 ಮಂದಿ ಇದ್ದಾರೆ. 5ರಿಂದ 52 ವರ್ಷಗಳವರೆಗಿನ ವಿಶೇಷಚೇತನರಿದ್ದಾರೆ. 21 ವರ್ಷಗಳ ನಂತರದವರಿಗೆ ಯೋಜನೆ ಬೇಕಾಗಿದೆ. ಅದಕ್ಕಾಗಿ ನಾವು ವಿಭಿನ್ನ ರೀತಿಯಲ್ಲಿ ಯೋಚಿಸಿದಾಗ ಬೆಂಗಳೂರು ಕ್ರಾಫ್ಟಿಸಂ ಫೌಂಡೇಶನ್​ ನಮಗೆ ಸಹಾಯ ಮಾಡಿತು. ಅವರು ನಮಗೆ ಹೂವಿನ ದಳಗಳಿಂದ ಅಗರಬತ್ತಿ ಮಾಡಲು ಪ್ರೇರೇಪಿಸಿದರು. ಇದರಿಂದ ವಯಸ್ಸಾದ ವಿಶೇಷ ಚೇತನರನ್ನು ಮುಖ್ಯವಾಹಿನಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದರು.

ಇದನ್ನೂ ಓದಿ:ಹಣತೆಗೆ ರಂಗು ತುಂಬುವ ವಿಶೇಷ ಚೇತನರು; ದೀಪಾವಳಿ ಹಬ್ಬಕ್ಕೆ ತಯಾರಿ

Last Updated : Nov 20, 2024, 9:39 AM IST

ABOUT THE AUTHOR

...view details