ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿವೆ. ಈ ಮೂಲಕ ಮತದಾನ ಜಾಗೃತಿ ಮತ್ತು ಮತದಾರರನ್ನು ಪ್ರೋತ್ಸಾಹಿಸಲು ಜಿಲ್ಲಾಡಳಿತ ಸಕಲ ಹೆಜ್ಜೆಗಳನ್ನಿಟ್ಟಿದೆ.
ಸೀರೆಯಲ್ಲಿ ಮತಜಾಗೃತಿ:ಮತದಾನದ ದಿನವಾದ ಇಂದು ಕೂಡ ಜಿಲ್ಲಾಡಳಿತ ಮತಜಾಗೃತಿಗೆ ಮುಂದಾಗಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ , ಜಿಲ್ಲೆಯ ಉಪ ಕಾರ್ಯದರ್ಶಿ ಲಕ್ಷ್ಮೀ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ಅವರು ಧರಿಸಿರುವ ರೇಷ್ಮೆ ಸೀರೆಯಲ್ಲಿ ಮತದಾನ ಘೋಷಣೆ ನೇಯಲಾಗಿದೆ. ಕೈ ಮಗ್ಗದಿಂದ ನೇದಿರುವ ರೇಷ್ಮೆ ಸೀರೆಯಲ್ಲಿ ಚುನಾವಣಾ ಪರ್ವ- ದೇಶದ ಗರ್ವ ಎಂಬ ಘೋಷವಾಕ್ಯವನ್ನು ಬರೆಯಲಾಗಿದೆ. ಮತದಾನವನ್ನು ಪ್ರೋತ್ಸಾಹಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಈ ಕಾರ್ಯ ಗಮನ ಸೆಳೆಯಿತು.
ಹಾಡಿನಿಂದ ಮತದಾರರಿಗೆ ಸ್ವಾಗತ: ರಾಮಸಮುದ್ರದಲ್ಲಿ ತೆರೆದಿರುವ ಸಾಂಸ್ಕೃತಿಕ ಮತಗಟ್ಟೆಯಲ್ಲಿಜಾನಪದ ಕಲಾವಿದರು ಮತದಾರರು ಸ್ವಾಗತಿಸಿ ಮತಗಟ್ಟೆಗೆ ಕರೆದೊಯ್ದರು. ತಂಬೂರಿ ಪದ, ಡಮರುಗ, ತಮಟೆ ವಾದ್ಯಗಳ ಮೂಲಕ ಮತದಾರರನ್ನು ಅದ್ಧೂರಿಯಾಗಿ ಸ್ವಾಗತಿಸಿ ಹಬ್ಬದಂತೆ ಸಂಭ್ರಮಿಸಲಾಯಿತು. ಇನ್ನು, ಮತಗಟ್ಟೆ ಮುಂಭಾಗ ಸೆಲ್ಫಿ ಪಾಯಿಂಟ್ ಕೂಡ ಮಾಡಲಾಗಿದೆ.
ಮತ್ತೊಂದೆಡೆ ಮತದಾನ ಆರಂಭ ಆಗುತ್ತಿದ್ದಂತೆ ವಿಶೇಷ ಅತಿಥಿ ಬಂದ ಘಟನೆ ಚಾಮರಾಜನಗರ ತಾಲೂಕಿನ ಸಣ್ಣೇಗಾಲ ಗ್ರಾಮದಲ್ಲಿ ನಡೆಯಿತು. ಮತದಾನ ಆರಂಭಗೊಳ್ಳುತ್ತಿದ್ದಂತೆ ಎಲ್ಲಿಂದಲೋ ಬಂದ ರಾಷ್ಟ್ರಪಕ್ಷಿ ನವಿಲು ಮತಗಟ್ಟೆಗೆ ಎಂಟ್ರಿ ಕೊಟ್ಟಿದೆ. ಬಳಿಕ, ಮತದಾರರನ್ನು ಕಂಡು ಸ್ವಲ್ಪ ಹೊತ್ತಿನ ಬಳಿಕ ಹಾರಿ ಹೋಗಿದೆ.
ವಿಶೇಷ ಮತಗಟ್ಟೆ: ಲಿಂಗ ಸಮಾನತೆ ಹಾಗೂ ಮತದಾನದಲ್ಲಿ ಮಹಿಳೆಯರ ಭಾಗವಹಿಸುವಿಕೆ ಉತ್ತೇಜಿಸಲು 'ಸಖಿ ಸೌರಭ' ಶೀರ್ಷಿಕೆಯಡಿ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಿ ಮಹಿಳೆಯರನ್ನು ಮತದಾನಕ್ಕೆ ಪ್ರೇರೇಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 16 ಸಖಿ ಸೌರಭ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.