ಹುಬ್ಬಳ್ಳಿ:ಮುಂಬರುವ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಹುಬ್ಬಳ್ಳಿ - ಎಸ್ಎಂವಿಟಿ ಬೆಂಗಳೂರು ಮತ್ತು ವಾಸ್ಕೋ ಡ ಗಾಮಾ - ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ನೈರುತ್ಯ ರೈಲ್ವೆಯು ಓಡಿಸಲಿದೆ. ವಿಶೇಷ ರೈಲುಗಳ ವಿವರಗಳು ಈ ಕೆಳಗಿನಂತಿದೆ.
ಹುಬ್ಬಳ್ಳಿ - ಬೆಂಗಳೂರು ಒನ್-ವೇ ಎಕ್ಸ್ಪ್ರೆಸ್ ವಿಶೇಷ ರೈಲು:ಈ ರೈಲು (07305) ಡಿಸೆಂಬರ್ 20ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಟು, ಅದೇ ದಿನ ಎಸ್ಎಂವಿಟಿ ಬೆಂಗಳೂರಿಗೆ ಸಂಜೆ 4:15ಕ್ಕೆ ತಲುಪಲಿದೆ. ಈ ರೈಲು ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಎಸ್ಎಂವಿಟಿ ಬೆಂಗಳೂರು - ವಾಸ್ಕೋ ಡ ಗಾಮಾ ನಡುವೆ ಎರಡು ಟ್ರಿಪ್ ವಿಶೇಷ (07306/07307) ರೈಲು:ರೈಲು ಸಂಖ್ಯೆ 07306 ಎಸ್ಎಂವಿಟಿ ಬೆಂಗಳೂರು - ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ಪ್ರೆಸ್ ರೈಲು ಡಿಸೆಂಬರ್ 20 ಮತ್ತು 22ರಂದು ಎಸ್ಎಂವಿಟಿ ಬೆಂಗಳೂರಿನಿಂದ ಸಂಜೆ 6:15ಕ್ಕೆ ಹೊರಟು, ಮರುದಿನ ವಾಸ್ಕೋ ಡ ಗಾಮಾ ನಿಲ್ದಾಣವನ್ನು ಬೆಳಗ್ಗೆ 8:45ಕ್ಕೆ ತಲುಪಲಿದೆ.
ಮರಳಿ ಇದೇ ರೈಲು (07307) ಡಿಸೆಂಬರ್ 21 ಮತ್ತು 23ರಂದು ವಾಸ್ಕೋ ಡ ಗಾಮಾ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಹೊರಟು, ಅದೇ ದಿನ ರಾತ್ರಿ 11:55ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಎಸ್ಎಂವಿಟಿ ಬೆಂಗಳೂರು - ವಾಸ್ಕೋ ಡ ಗಾಮಾ ನಡುವೆ ಒಂದು ಟ್ರಿಪ್ ವಿಶೇಷ (07308/07309) ರೈಲು:ರೈಲು ಸಂಖ್ಯೆ 07308 ಎಸ್ಎಂವಿಟಿ ಬೆಂಗಳೂರು - ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ಪ್ರೆಸ್ ರೈಲು ಡಿಸೆಂಬರ್ 24ರಂದು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ವಾಸ್ಕೋ ಡ ಗಾಮಾ ನಿಲ್ದಾಣಕ್ಕೆ ಬರಲಿದೆ.
ವಾಪಸ್, ರೈಲು ಸಂಖ್ಯೆ 07309 ವಾಸ್ಕೋ ಡ ಗಾಮಾ - ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು ಡಿಸೆಂಬರ್ 29ರಂದು ವಾಸ್ಕೋ ಡ ಗಾಮಾದಿಂದ ಮಧ್ಯಾಹ್ನ 2:30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5:15ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.