ಬೆಳಗಾವಿ: ಮರಾಠ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಕೇಂದ್ರದ ಯುದ್ಧ ಗಾಯಾಳುಗಳ ಫೌಂಡೇಷನ್ ವತಿಯಿಂದ ಯುದ್ಧದಲ್ಲಿ ಗಾಯಗೊಂಡ ಯೋಧರ ಅಸಾಮರ್ಥ್ಯವನ್ನು ಸಾಮರ್ಥ್ಯವಾಗಿ ಪರಿವರ್ತಿಸುವ ಉದ್ದೇಶದಿಂದ ಫೆಬ್ರವರಿ 18ರಂದು ಬೆಳಗಾವಿಯಲ್ಲಿ ವಿಶೇಷ ರ್‍ಯಾಲಿ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ, ನಿವೃತ್ತ ಲೆಫ್ಟಿನಂಟ್ ಜನರಲ್ ಆಸೀಫ್ ಮಿಸ್ತ್ರಿ ತಿಳಿಸಿದ್ದಾರೆ.
ಎಂಎಲ್‌ಐಆರ್‌ಸಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ದೇಶದ ರಕ್ಷಣೆಗೋಸ್ಕರ ನಮ್ಮ ಯೋಧರ ತ್ಯಾಗ ಅಪ್ರತಿಮ. ಯುದ್ಧಗಳಲ್ಲಿ ಹಲವಾರು ಯೋಧರು ಹುತಾತ್ಮರಾದರೆ, ಬಹಳಷ್ಟು ಯೋಧರು ಗಾಯಗೊಂಡಿದ್ದಾರೆ. ಪ್ರಾಣದ ಹಂಗು ತೊರೆದು ಯುದ್ಧವೇನೋ ಗೆದ್ದರು. ಯುದ್ಧ ಮುಗಿಯಿತು. ಆದರೆ, ಗಾಯಾಳುಗಳಾಗಿ ಅವರು ಜೀವನದೊಂದಿಗೆ ಪ್ರತಿನಿತ್ಯ ಸೆಣಸಾಡುತ್ತಿದ್ದಾರೆ" ಎಂದರು.
"ಯುದ್ಧದಲ್ಲಿ ಗಾಯಗೊಂಡು ಜೀವನದುದ್ದಕ್ಕೂ ಪರಿತಪಿಸುತ್ತಿರುವ ಯೋಧರ ಆರೈಕೆಯನ್ನು ಫೌಂಡೇಶನ್ ವತಿಯಿಂದ ಮಾಡಲಾಗುತ್ತದೆ. ನೌಕಾದಳ, ಅಗ್ನಿವೀರರು, ಎಲ್ಲ ವಿಭಾಗದ ಗಾಯಾಳು ಯೋಧರ ಆರೈಕೆ ಮಾಡಿ ಅವರ ಅಸಾಮರ್ಥ್ಯವನ್ನು ಸಾಮರ್ಥ್ಯವಾಗಿ ಪರಿವರ್ತಿಸುವ ಕೆಲಸವನ್ನು ಫೌಂಡೇಶನ್ ಮಾಡುತ್ತಿದೆ" ಎಂದು ಹೇಳಿದರು.