ಹುಬ್ಬಳ್ಳಿ:ಶೀಗೆ ಹುಣ್ಣಿಮೆಯ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯಿಂದ ಮಾಡಲಾಗಿದ್ದ ಯಲ್ಲಮ್ಮನಗುಡ್ಡ ವಿಶೇಷ ಬಸ್ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಯ ಮೇರೆಗೆ ದೀಪಾವಳಿಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರಗಳಂದು ಈ ವಿಶೇಷ ಬಸ್ ಸಂಚಾರವನ್ನು ಮುಂದುವರೆಸಲಾಗುವುದು ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.
ಶೀಗೆ ಹುಣ್ಣಿಮೆಯ ಪ್ರಯುಕ್ತ ಸವದತ್ತಿ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಅಕ್ಟೋಬರ್ 17ರಂದು ಗುರುವಾರ, ದೇವಿಯ ವಾರದ ನಿಮಿತ್ತ 18ರಂದು ಶುಕ್ರವಾರ ಹಾಗೂ 20ರಂದು ಭಾನುವಾರ ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಬಸ್ ನಿಲ್ದಾಣ ಹಾಗೂ ನವಲಗುಂದ ಬಸ್ ನಿಲ್ದಾಣದಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಈ ವಿಶೇಷ ಬಸ್ಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಅಕ್ಟೋಬರ್ 17 ಗುರುವಾರದಿಂದ ಅ.20ರ ರವಿವಾರದವರೆಗೆ ಒಟ್ಟು 112 ವಿಶೇಷ ಬಸ್ಗಳನ್ನು ಓಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ, ನವಲಗುಂದ ಹಾಗೂ ಸುತ್ತಮುತ್ತಲಿನ ಊರುಗಳ ಅಂದಾಜು 13 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪ್ರಯಾಣ ಮಾಡಿದ್ದಾರೆ. ಅವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರೇ ಇದ್ದರು ಎಂದು ಮಾಹಿತಿ ನೀಡಿದ್ದಾರೆ.