ಕರ್ನಾಟಕ

karnataka

ETV Bharat / state

ಮಹಾಕುಂಭದಲ್ಲಿ ಕಾಲ್ತುಳಿತ ಪ್ರಕರಣ: ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದೇನು? - U T KHADER

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

U T KHADER
ಸ್ಪೀಕರ್‌ ಯು.ಟಿ.ಖಾದರ್‌ (ETV Bharat)

By ETV Bharat Karnataka Team

Published : Jan 29, 2025, 3:19 PM IST

ಮೈಸೂರು:ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಇಂತಹ ಘಟನೆಗಳು ಎಲ್ಲೂ ಕೂಡ ಜರುಗಬಾರದು. ಮಹಾಕುಂಭಮೇಳದಲ್ಲಿ ಕಾಲ್ತುಳಿತ ನೋವಿನ ವಿಚಾರವಾಗಿದೆ. ಕಾಲ್ತುಳಿತ ಹೇಗೆ ಆಯಿತು ಎಂದು ಗೊತ್ತಿಲ್ಲ. ಮಹಾಕುಂಭಮೇಳಕ್ಕೆ ನಮ್ಮ ರಾಜ್ಯದಿಂದ ಎಷ್ಟು ಜನ ಭಕ್ತರು ಅಲ್ಲಿಗೆ ಹೋಗಿದ್ದಾರೆ ಎಂದು ಗೊತ್ತಿಲ್ಲ. ಆದರೆ, ರಾಜ್ಯ ಸರ್ಕಾರದ ಬಳಿ ಆ ಮಾಹಿತಿ ಇರಬಹುದು" ಎಂದು ಹೇಳಿದರು.

"ರಾಜ್ಯದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ. ನಾವು ಪ್ರಯಾಗ್‌ರಾಜ್​ಗೆ ಹೋಗಿ ಬಂದಿದ್ದೇವೆ. ವಿಐಪಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ತೊಂದರೆ ಇರುವುದಿಲ್ಲ. ಜನ ಸಾಮಾನ್ಯರಿಗೆ ಯಾವ ರೀತಿ ವ್ಯವಸ್ಥೆ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲ" ಎಂದರು.

ಚಾಮರಾಜನಗರದ ಇಬ್ಬರು ಯಾತ್ರಿಗಳು ಸುರಕ್ಷಿತ:ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ಮಹಾಕುಂಭದಲ್ಲಿ ಇಂದು ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ಚಾಮರಾಜನಗರದ ಇಬ್ಬರು ಯಾತ್ರಿಗಳು ಸುರಕ್ಷಿತವಾಗಿದ್ದು, ಅವಘಡದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಚಾಮರಾಜನಗರ ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ನಾಯಕ್, ನಗರಸಭೆ ಮಾಜಿ ಸದಸ್ಯ ಹುಲ್ಲಿನ ಶಿವಣ್ಣ ಮಹಾಕುಂಭದಲ್ಲಿ ಭಾಗಿಯಾಗಿ, ಮೌನಿ ಅಮಾವಾಸ್ಯೆಯ ದಿನವಾದ ಇಂದು ಬೆಳಗ್ಗೆ 7.30 ರ ಸುಮಾರಿಗೆ ಪವಿತ್ರ ಸ್ನಾನ ಮಾಡಿದ್ದಾರೆ. ಕಾಲ್ತುಳಿತ ಉಂಟಾಗಿದ್ದು ಅವಘಡದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಈ ಕುರಿತು ಸುರೇಶ್ ನಾಯಕ 'ಈಟಿವಿ ಭಾರತ್'​ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. "ಮೌನಿ ಅಮಾವಾಸ್ಯೆಯ ಪುಣ್ಯ ಸ್ನಾನ ಮಾಡಲು 4 ರಿಂದ 5 ಕೋಟಿ ಭಕ್ತರು ಬಂದಿದ್ದಾರೆ. ಸಾಧು - ಸಂತರ ಸ್ನಾನದ ತನಕ ಕೋಟ್ಯಂತರ ಮಂದಿಯನ್ನು ತಡೆದ ಪರಿಣಾಮ ಈ ಅವಘಡ ಉಂಟಾಗಿದೆ.‌ ಇನ್ನೂ 10 ರಿಂದ 15 ಗೇಟ್​ಗಳನ್ನು ಸ್ಥಾಪಿಸಿ ಪವಿತ್ರ ಸ್ನಾನಕ್ಕೆ 24 ಗಂಟೆಗಳ ಅವಕಾಶ ಮಾಡಿಕೊಡಬೇಕು" ಎಂದು ಒತ್ತಾಯಿಸಿದ್ದಾರೆ.

"ತಾವಿಬ್ಬರೂ ಸುರಕ್ಷಿತವಾಗಿದ್ದೇವೆ. ತಾವು ಪವಿತ್ರ ಸ್ನಾನ ಕೈಗೊಂಡು ಹಿಂತಿರುಗಿದ ಬಳಿಕ ಕಾಲ್ತುಳಿತ ಉಂಟಾಗಿದೆ. ಒಮ್ಮೆಗೇ ಕೋಟ್ಯಂತರ ಮಂದಿ ನುಗ್ಗಿದ ಪರಿಣಾಮ ಹೀಗಾಗಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಮಹಾಕುಂಭ ಮೇಳದಲ್ಲಿ ಕಾಲ್ತುಳಿತ : ಬೆಳಗಾವಿಗರ ನಾಪತ್ತೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?

ಇದನ್ನೂ ಓದಿ:ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತ; 17 ಮಂದಿ ಸಾವು ಶಂಕೆ, ಸಂಕಷ್ಟದಲ್ಲಿ ಬೆಳಗಾವಿಯ ಭಕ್ತರು

ABOUT THE AUTHOR

...view details