ಬೆಳಗಾವಿ: ಸ್ಪೀಕರ್ ಯು.ಟಿ.ಖಾದರ್ ಬುಧವಾರವೂ ಎರಡನೇ ಬಾರಿಗೆ ಮಧ್ಯರಾತ್ರಿವರೆಗೆ ಕಲಾಪ ನಡೆಸಿದರು. ಆ ಮೂಲಕ 15 ತಾಸು ಕಲಾಪ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ 9.40 ರಿಂದ ಮಧ್ಯರಾತ್ರಿ 12.40ರ ವರೆಗೆ ಕಲಾಪ ನಡೆಯಿತು. ಸತತ 15 ಗಂಟೆಗಳ ಕಾಲ ನಿರಂತರವಾಗಿ ಸದನ ನಡೆಸಿದ ಸ್ಪೀಕರ್ ಎಂಬ ಖ್ಯಾತಿಗೆ ಅವರು ಭಾಜನರಾಗಿದ್ದಾರೆ. ಮೊನ್ನೆ ಸೋಮವಾರ 14 ಗಂಟೆ ಕಾಲ ಕಲಾಪ ನಡೆಸಿದ್ದರು. ಇದೀಗ 15 ಗಂಟೆ ಕಾಲ ಸದನ ನಡೆಸಿ ದಾಖಲೆ ಮಾಡಿದ್ದಾರೆ. ಮಧ್ಯಾಹ್ನದ ಭೋಜನಕ್ಕೂ ಬಿಡುವು ಕೊಡದೇ, ಮಧ್ಯರಾತ್ರಿ 12.40ವರೆಗೆ ನಿರಂತರ ಕಲಾಪ ನಡೆದಿದೆ.
ಮಧ್ಯರಾತ್ರಿ ಕಲಾಪ ಮುಂದೂಡುವ ವೇಳೆ ಸದನದಲ್ಲಿ ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ನಾಲ್ವರು ಸಚಿವರು ಮತ್ತು 10 ಕಾಂಗ್ರೆಸ್ ಶಾಸಕರು, 6 ಬಿಜೆಪಿ ಶಾಸಕರು ಮತ್ತು 1 ಪಕ್ಷೇತರ ಶಾಸಕ ಸೇರಿ 17 ಶಾಸಕರು ಉಪಸ್ಥಿತರಿದ್ದರು. ಪ್ರಶ್ನೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಮೇಲೆ ಮಧ್ಯರಾತ್ರಿವರೆಗೆ ಚರ್ಚೆ ನಡೆಸಿದರು.
ಕಲಾಪದ ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ''ಕಾರ್ಯಕಲಾಪಗಳ ಪಟ್ಟಿಯನ್ನು ಮಾಡಿರುತ್ತೇವೆ. ಅದರಂತೆ ನಾವು ಕಲಾಪ ನಡೆಸಬೇಕು. ಬಹಳ ಆಸಕ್ತಿಯಿಂದ ಪ್ರಶ್ನೆ ಕೇಳಿರುತ್ತಾರೆ. ಒಂದು ಪ್ರಶ್ನೆಗಾಗಿ ಹಲವು ಗಂಟೆ ಕಾದಿರುತ್ತಾರೆ. ಬೆಳಗ್ಗೆಯೆಲ್ಲ ನಾಯಕರು ಬೇರೆ ಚರ್ಚೆ ಮಾಡಿರುತ್ತಾರೆ. ಅದಕ್ಕೆ ಎಲ್ಲರಿಗೆ ಅವಕಾಶ ಸಿಗಬೇಕು. ಬೇರೆ ಬೇರೆ ಚರ್ಚೆಗಳು ನಡೆದಿವೆ'' ಎಂದರು.
ಇದನ್ನೂ ಓದಿ:ಹೊಸಕೋಟೆ, ನೆಲಮಂಗಲ, ಬಿಡದಿವರೆಗೆ ಮೆಟ್ರೊ ರೈಲು ವಿಸ್ತರಣೆಗೆ ಸರ್ಕಾರ ಚಿಂತನೆ: ಶಿವಕುಮಾರ್ ಘೋಷಣೆ
ಕೆಲವು ಶಾಸಕರಿಗೆ ಬೇಸರ ಆಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ''ಬೇಜಾರು ಅನ್ನೋದು ಇಲ್ಲ. ಆಸಕ್ತಿ ಇದ್ದವರು ಕಲಾಪದಲ್ಲಿ ಭಾಗವಹಿಸಿದ್ದಾರೆ. ಒಂದು ಪ್ರಶ್ನೆಗೆ ಐದಾರು ಗಂಟೆ ಕಾದು ಕುಳಿತಿದ್ದಾರೆ. ನಮಗೆ ಕೆಲಸ ಮುಖ್ಯ, ದಾಖಲೆ ಅಲ್ಲ. 8 ಗಂಟೆಗೆ ಮುಗಿಸಿ ಹೋಗಿದ್ದರೆ ಹೇಗೆ?. ಕೆಲವು ಶಾಸಕರಿಗೆ ಬೇಸರವಾಗುತ್ತಿದೆ. ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದೇವೆ. ಮಧ್ಯಾಹ್ನದ ಊಟಕ್ಕೆ ಬ್ರೇಕ್ ಕೊಟ್ಟಿಲ್ಲ. ಯಾರು ಚರ್ಚೆಗೆ ಕೇಳಿದರೂ ಅವಕಾಶ ಕೊಟ್ಟಿದ್ದೇವೆ'' ಎಂದು ತಿಳಿಸಿದರು.
ಇದನ್ನೂ ಓದಿ:ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧತೆ: ಸಚಿವ ಎಂ.ಬಿ.ಪಾಟೀಲ್
ಈ ಬಾರಿ ಸಮರ್ಪಕ ಚರ್ಚೆಗಳಾಗಿಲ್ಲ ಎಂಬ ವಿಚಾರವಾಗಿ ಮಾತನಾಡಿ, ''ಚರ್ಚೆ ನಡೆದಿದೆ. ಅನುದಾನದ ಕೊರತೆ ಬಗ್ಗೆ ಚರ್ಚೆ ನಡೆದಿತ್ತು. ಅದರ ಬಗ್ಗೆ ಸಿಎಂ ಉತ್ತರ ಕೊಡುತ್ತಾರೆ. ವಕ್ಫ್ ಬಗ್ಗೆಯೂ ಚರ್ಚೆ ಆಗಿತ್ತು. ಅದಕ್ಕೆ ಸುಧೀರ್ಘವಾದ ಉತ್ತರ ಕೊಡಲಾಗಿದೆ. ಬಾಣಂತಿಯರ ಸಾವಿನ ಬಗ್ಗೆ ಚರ್ಚೆಯಾಯ್ತು. ಅದಕ್ಕೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ಕೊಡಲಿದ್ದಾರೆ'' ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ವಕ್ಪ್ ಆಸ್ತಿ ಗೊಂದಲ ನಿವಾರಣೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲು ಸಿದ್ಧ: ಸಿಎಂ