ಕರ್ನಾಟಕ

karnataka

By ETV Bharat Karnataka Team

Published : Jul 18, 2024, 8:26 AM IST

ETV Bharat / state

ಬೆಂಗಳೂರಿನ ಡಬಲ್-ಡೆಕ್ಕರ್ ರೈಲ್ ಕಂ ರೋಡ್ ಫ್ಲೈಓವರ್ ಸಂಚಾರಕ್ಕೆ ಮುಕ್ತ: 40 ನಿಮಿಷದ ಪ್ರಯಾಣಕ್ಕೆ ಇನ್ಮುಂದೆ 5 ನಿಮಿಷ! - Double Decker Rail Cum Road Flyover

ದಕ್ಷಿಣ ಭಾರತದ ಮೊದಲ ಡಬಲ್-ಡೆಕ್ಕರ್​ ಮೇಲ್ಸೇತುವೆ ಬೆಂಗಳೂರಿನಲ್ಲಿ ಉದ್ಘಾಟನೆಗೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ.

ಡಬಲ್​ ಡೆಕ್ಕರ್​ ಮೇಲ್ಸೇತುವೆ
ಬೆಂಗಳೂರಿನ ಡಬಲ್-ಡೆಕ್ಕರ್​ ಮೇಲ್ಸೇತುವೆ (IANS)

ಡಬಲ್-ಡೆಕ್ಕರ್ ರೈಲ್ ಕಂ ರೋಡ್ ಫ್ಲೈಓವರ್ ಉದ್ಘಾಟನೆ ಬಳಿಕ ಡಿಸಿಎಂ ಮಾಹಿತಿ (ETV Bharat)

ಬೆಂಗಳೂರು: ಇದೇ ಮೊದಲ ಬಾರಿಗೆ ನಗರದ ರಾಗಿಗುಡ್ಡದಿಂದ ಸಿಲ್ಕ್​ ಬೋರ್ಡ್​ ಜಂಕ್ಷನ್‌ವರೆಗೆ ನಿರ್ಮಾಣವಾಗಿರುವ ಬಹುನಿರೀಕ್ಷಿತ 3.36 ಕಿ.ಮೀ. ಉದ್ದದ ಡಬಲ್​-ಡೆಕ್ಕರ್ ರೈಲ್ ಕಂ ರೋಡ್​ ಮೇಲ್ಸೇತುವೆ ಬುಧವಾರ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಯಿತು.

449 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಬ್ಬಲ್-ಡೆಕ್ಕರ್ ಮೇಲ್ಸೇತುವೆ ಕೆಳ ರಸ್ತೆಯಿಂದ ಡಬ್ಬಲ್-ಡಕ್ಕರ್‌ನ ಮೊದಲ ಮೇಲ್ಸೇತುವೆಯು 8 ಮೀಟರ್ ಎತ್ತರದಲ್ಲಿದೆ. ಮೆಟ್ರೋ ವಯಾಡಕ್ಟ್ 16 ಮೀಟರ್ ಎತ್ತರ ಹೊಂದಿದೆ. ಈ ಮೇಲ್ಸೇತುವೆಯ ಮೂಲಕ ಹೆಚ್​ಎಸ್‌ಆ‌ರ್ ಲೇಔಟ್ ಹಾಗೂ ಹೊಸೂರು ಲೇಔಟ್‌ ಅನ್ನು ಅಡ್ಡಿಯಿಲ್ಲದೆ ಬೇಗ ತಲುಪಬಹುದು.

ಮೆಟ್ರೋ ರೈಲು ಸಂಚಾರವಿರುವ ಮೊದಲ ರೈಲ್ ಕಂ ರೋಡ್​ ಇದಾಗಿದೆ. ಈ ಮೇಲ್ಸೇತುವೆ ಮೇಲಿನ ಡೆಕ್​ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾ‌ರ್ ಇದ್ದರೆ, ಕೆಳಗಿನ ಡೆಕ್‌ನಲ್ಲಿ ವಾಹನ ಸಂಚಾರಕ್ಕಾಗಿ ಎಲಿವೇಟೆಡ್ ರಸ್ತೆ ಇದೆ.

ಡಬ್ಬಲ್-ಡೆಕ್ಕರ್ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಹೇಗೆ?: ರಾಗಿಗುಡ್ಡದಿಂದ ಡಬಲ್-ಡೆಕ್ಕರ್ ಮೇಲ್ಸೇತುವೆಯ ಮೂಲಕ ಬರುವ ವಾಹನ ಸವಾರರು ರಾಂಪ್ ಎ ಮುಖಾಂತರ ಹೊಸೂರು ರಸ್ತೆ ಮತ್ತು ರಾಂಪ್ ಸಿ ಮೂಲಕ ಎಚ್​ಎಸ್​ಆರ್​​ ಲೇಔಟ್ ತಲುಪುತ್ತಾರೆ. ನೆಲಮಟ್ಟದಲ್ಲಿರುವ ರಾಂಪ್ ಬಿ, ಬಿಟಿಎಂ ಬದಿಯಿಂದ ಹೊರವರ್ತುಲ ರಸ್ತೆ ಮತ್ತು ಹೊಸೂರು ರಸ್ತೆಯನ್ನು ಪ್ರವೇಶಿಸಲು ರಾಂಪ್ ಅ​ನ್ನು ಸಂಪರ್ಕಿಸುತ್ತದೆ. ಹೆಚ್​​ಎಸ್‌ಆ‌ರ್ ಲೇಔಟ್​ನಿಂದ ಬರುವ ವಾಹನ ಬಳಕೆದಾರರು ರಾಂಪ್​ ಎ ಮತ್ತು ಹಳದಿ ಮೆಟ್ರೋ ರೈಲಿನ ಮೇಲೆ ಹಾದು ಹೋಗುವ ರಾಂಪ್ ಡಿ ಮೂಲಕ ರಾಗಿಗುಡ್ಡ ಕಡೆಗೆ ತಲುಪಲು ಸಾಧ್ಯವಾಗುತ್ತದೆ.

ಬಿಟಿಎಂ ಲೇಔಟ್‌ಗೆ ಪ್ರವೇಶಿಸಲು ಕೆಳಗಿನ ರಾಂಪ್​ನೊಂದಿಗೆ ಮುಂದುವರೆಯುತ್ತದೆ. ರಾಗಿಗುಡ್ಡದಿಂದ ಸಿಎಸ್‌ಬಿ ಜಂಕ್ಷನ್​ವರೆಗೆ ಹಳದಿ ಮಾರ್ಗಕ್ಕಾಗಿ ರಸ್ತೆ ಮೇಲ್ಸೇತುವೆ ಮೊದಲ ಹಂತವನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಮೇಲ್ಸೇತುವೆಯ ಜೊತೆಗೆ ಹಾದುಹೋಗುವ ಹಳದಿ ಲೈನ್ ಮೆಟ್ರೋ ಸದ್ಯಕ್ಕೆ ಕಾರ್ಯಾರಂಭಿಸಿಲ್ಲ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(ಬಿಎಂಆರ್‌ಸಿಎಲ್) ಪ್ರಕಾರ, ಈ ವರ್ಷದ ಡಿಸೆಂಬರ್​ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಅನುಕೂಲಗಳೇನು?: ಈ ಮೊದಲು ಸಿಲ್ಕ್​ ಬೋರ್ಡ್ ತಲುಪಲು 30ರಿಂದ 40 ನಿಮಿಷ ಸಮಯ ಬೇಕಾಗುತ್ತಿತ್ತು. ಆದರೆ ಡಬ್ಬಲ್​-ಡೆಕ್ಕರ್​ ಮೇಲ್ಸೇತುವೆ ನಿರ್ಮಾಣದಿಂದ ಪ್ರಯಾಣಿಕರು 5ರಿಂದ 6 ನಿಮಿಷದಲ್ಲೇ ಕ್ರಮಿಸಬಹುದು. ಇದು ಹೊರ ವರ್ತುಲ ರಸ್ತೆಯ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆ ಹೊಂದಿದೆ. ಸದ್ಯಕ್ಕೆ ಮೇಲ್ಸೇತುವೆ ರಸ್ತೆ ವಾಹನಗಳ ಸಂಚಾರಕ್ಕೆ ಮುಕ್ತವಾಗುವುದರಿಂದ ಎಲೆಕ್ಟ್ರಾನಿಕ್​​ ಸಿಟಿ ಕಡೆಗೆ ತೆರಳುವವರಿಗೆ ಹೆಚ್ಚು ಉಪಯೋಗವಾಗಲಿದೆ. ಅಲ್ಲದೇ, ಹೆಚ್​​ಎಸ್‌ಆರ್​ ಲೇಔಟ್, ಬಿಟಿಎಂ ಲೇಔಟ್‌ ಕಡೆಗೆ ಸಂಚರಿಸುವ ಜನರ ಸಮಯ ಉಳಿತಾಯವಾಗಲಿದೆ.

ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್:"ಬೆಂಗಳೂರಿನ ರಾಗಿಗುಡ್ಡ- ಸಿಲ್ಕ್ ಬೋರ್ಡ್ ಜಂಕ್ಷನ್' ವರೆಗೆ ನಿರ್ಮಾಣವಾಗಿರುವ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್'ನ ಪ್ರಾಯೋಗಿಕ ಸಂಚಾರಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ವಿಶ್ವದರ್ಜೆಯ ಈ ಡಬಲ್-ಡೆಕ್ಕರ್ ಮೇಲ್ಸೇತುವೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿದೆ. ಅಲ್ಲದೇ, ಸಿಗ್ನಲ್​ ಮುಕ್ತ ಕಾರಿಡಾರ್​ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಹೇಳಿದ್ದಾರೆ.

ಇದನ್ನೂ ಓದಿ:ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರ ಸ್ವಾಗತಾರ್ಹ: ಬಿ.ವೈ.ವಿಜಯೇಂದ್ರ - B Y Vijayendra

ABOUT THE AUTHOR

...view details