ಬೆಂಗಳೂರು: ಬೆಳಿಗ್ಗೆ ಉಪಹಾರ ಮಾಡಿಲ್ಲ ಎಂಬ ಒಂದೇ ಕಾರಣಕ್ಕಾಗಿ ತಾಯಿಯ ತಲೆಗೆ ರಾಡ್ನಿಂದ ಹೊಡೆದು ಹತ್ಯೆಗೈದ ಪುತ್ರ ಬಳಿಕ ಕೆ.ಆರ್.ಪುರ ಪೊಲೀಸರಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ. ಕೆ.ಆರ್.ಪುರದ ಜಸ್ಟೀಸ್ ಭೀಮಯ್ಯ ಲೇಔಟ್ನಲ್ಲಿ ವಾಸವಾಗಿರುವ ನೇತ್ರಾವತಿ (40) ಕೊಲೆಯಾದವರು. 17 ವರ್ಷದ ಆರೋಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಸಂಪೂರ್ಣ ವಿವರ:ಮುಳಬಾಗಿಲಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಆರೋಪಿ ಪುತ್ರ ನಿನ್ನೆ ಮನೆಗೆ ಬಂದಿದ್ದಾನೆ. ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡು ಊಟ ಮಾಡದೇ ಮಲಗಿದ್ದ. ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಹೋಗಲು ಸಿದ್ಧನಾಗಿದ್ದಾನೆ. 7.30 ಗಂಟೆಯಾದರೂ ತಿಂಡಿ ಮಾಡದೆ ತಾಯಿ ನಿದ್ರಿಸುತ್ತಿರುವುದನ್ನು ಗಮನಿಸಿ ಕೋಪಗೊಂಡಿದ್ದಾನೆ. ಯಾಕೆ ತಿಂಡಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾನೆ. ಕೋಪದಲ್ಲಿದ್ದ ನೇತ್ರಾ, ನೀನು ನನ್ನ ಮಗನೇ ಅಲ್ಲ ಅಂದಿದ್ದಾರೆ. ಮತ್ತೆ ಸಿಡಿಮಿಡಿಗೊಂಡು ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ.
ಇದರಿಂದ ಆಕ್ರೋಶಗೊಂಡ ಮಗ ಮನೆಯಲ್ಲೇ ಇದ್ದ ಕಬ್ಬಿಣದ ರಾಡ್ನಿಂದ ನೇತ್ರಾ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಆತಂಕಗೊಂಡ ಮಗ ದಿಕ್ಕು ತೋಚದೆ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿ ಶರಣಾಗಿದ್ದಾನೆ. ಕಳೆದ 30 ವರ್ಷಗಳಿಂದ ನೇತ್ರಾವತಿ ಕುಟುಂಬ ಕೆ.ಆರ್.ಪುರದಲ್ಲಿ ವಾಸವಾಗಿತ್ತು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು ಕೆಲಸಕ್ಕೆ ಹೋಗುತ್ತಿದ್ದರು. ಮೂಲತಃ ಮುಳಬಾಗಿಲು ಆಗಿದ್ದರಿಂದ ಅಲ್ಲಿನ ಕಾಲೇಜೊಂದರಲ್ಲಿ ಮಗನನ್ನು ಉನ್ನತ ವ್ಯಾಸಂಗಕ್ಕೆ ಸೇರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: ಇಂದು ಬೆಳಿಗ್ಗೆ 7ರಿಂದ 8ರ ಸುಮಾರಿಗೆ ಕೊಲೆಯಾಗಿದೆ. ನೇತ್ರಾವತಿ ಎಂಬವರನ್ನು ಅವರ ಮಗನೇ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿ ಅಪ್ರಾಪ್ತ. ಮುಳಬಾಗಿಲಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದಾನೆ. ಸದ್ಯ ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತದೆ ಎಂದು ಡಿಸಿಪಿ ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ:ಸ್ಕೂಟರ್ಗೆ ಬಿಎಂಟಿಸಿ ಬಸ್ ಡಿಕ್ಕಿ: ಕಾಲೇಜು ವಿದ್ಯಾರ್ಥಿನಿ ಸಾವು