ಹಾವೇರಿ :ಅಳಿಯನಿಗೆ ಮದ್ಯ ಕುಡಿಸಿ ಮಾವನೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ನಡೆದಿದೆ. ಮಾಗೋಡ ಗ್ರಾಮದ ಸಲೀಂ ದಾದಾಫೀರ್ ಒಲೆಕಾರ್ (25) ಹತ್ಯೆಗೀಡಾಗಿದ್ದು, ಹೈದರ ಚಮನಸಾಬ್ ಹಲಗೇರಿ (32) ಕೊಲೆ ಮಾಡಿದ ಆರೋಪಿ.
ಫೆ.23 ತಡರಾತ್ರಿ ನಗರದ ಹೊರವಲಯದಲ್ಲಿ ಸಲೀಂ ದಾದಾಫೀರ್ ಒಲೆಕಾರ್ ಮತ್ತು ಚಮನಸಾಬ್ ಹಲಗೇರಿ ಇಬ್ಬರು ಮದ್ಯ ಸೇವನೆ ಮಾಡಿದ್ದರು. ಬಳಿಕ ಸಲೀಂ ದಾದಾಫೀರ್ ಒಲೆಕಾರ್ಗೆ ಚಾಕುವಿನಿಂದ ಇರಿದು ಚಮನಸಾಬ್ ಹಲಗೇರಿ ಕೊಲೆ ಮಾಡಿದ್ದನು. ಗದಗ-ಹೊನ್ನಾಳಿ ಹೆದ್ದಾರಿ ಪಕ್ಕದಲ್ಲಿ ಶವ ಎಸೆದು ಹೋಗಿದ್ದನು. ಕೃತ್ಯ ನಡೆದ ನಂತರ ಶನಿವಾರ ಆರೋಪಿಯೇ ನಗರ ಪೊಲೀಸ್ ಠಾಣೆಗೆ ಬಂದು ಕೊಲೆ ಮಾಡಿರುವುದಾಗಿ ಶರಣಾಗಿದ್ದಾನೆ. ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಾವೇರಿ ಎಸ್ಪಿ ಅಂಶುಕುಮಾರ್ ಮಾಹಿತಿ ನೀಡಿದರು.
ಚಾಮರಾಜನಗರದಲ್ಲೂ ಇಂತಹದ್ದೇ ಪ್ರಕರಣ :ಇನ್ನೊಂದು ಕಡೆ ಫೆ.22 ರಂದುಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದಲ್ಲಿ ಮಗಳಿಗೆ ಕಾಟ ಕೊಡುತ್ತಾನೆಂದು ಮಾವನು ತನ್ನ ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಪ್ರೀತಿಸಿ ಮದುವೆಯಾಗಿದ್ದ ಹುಬ್ಬಳ್ಳಿ ಮೂಲದ ಉಮೇಶ್ (28) ಮೃತ ವ್ಯಕ್ತಿ. ಕೊಲೆ ಮಾಡಿದ ಮಾವ ನಂಜುಂಡಯ್ಯನನ್ನು ಕುದೇರು ಪೊಲೀಸರು ವಶಕ್ಕೆ ಪಡೆದಿದ್ದರು. ನಿತ್ಯ ಕುಡಿದು ಬಂದು ರಂಪಾಟ ಮಾಡುತ್ತಿದ್ದರಿಂದ ಬೇಸತ್ತ ಮಾವ ಕೊಡಲಿಯಿಂದ ಕೊಚ್ಚಿ ಅಳಿಯನನ್ನು ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದರು.
ಬಾವ-ಮೈದುನನ ಗಲಾಟೆ ಕೊಲೆಯಲ್ಲಿ ಅಂತ್ಯ :ಬಾವ-ಮೈದುನನ ಗಲಾಟೆ ಓರ್ವನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ಫೆ.22 ಗುರುವಾರ ಪ್ರಕರಣ ಜರುಗಿತ್ತು. ಸಾಗಡೆ ಗ್ರಾಮದ ನಾಗೇಂದ್ರ ಮೃತ ವ್ಯಕ್ತಿಯಾಗಿದ್ದು, ರಾಜು ಎಂಬಾತ ಚಾಕುವಿನಿಂದ ಇರಿದ ಈತನ ಬಾವ. ಹಣಕಾಸಿನ ವಿಚಾರಕ್ಕೆ ಜಗಳ ಆರಂಭವಾಗಿ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಮೈದುನನ್ನೇ ಬಾವ ಕೊಲೆ ಮಾಡಿದ್ದನು. ಈ ಕುರಿತು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದರು.
ಇದನ್ನೂ ಓದಿ :ಒಂದು ಗುಂಟೆ ಜಾಗ, ಕಾರಿಗಾಗಿ ಗಲಾಟೆ: ತಮ್ಮನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಣ್ಣ