ಕರ್ನಾಟಕ

karnataka

ETV Bharat / state

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಗೆ ಮಗನಿಂದ ಯಕೃತ್‌ ದಾನ: ಖಾಸಗಿ ಆಸ್ಪತ್ರೆಯಿಂದ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ - Son donated Liver to mother - SON DONATED LIVER TO MOTHER

31 ವರ್ಷದ ಮಗ ತನ್ನ ಯಕೃತ್​ನ ಭಾಗವನ್ನು ತಾಯಿಗೆ ದಾನ ಮಾಡಿದ್ದು, ತಾಯಿ ಹಾಗೂ ಮಗ ಇಬ್ಬರೂ ಸದ್ಯ ಆರೋಗ್ಯವಾಗಿದ್ದಾರೆ ಎಂದು ಫೋರ್ಟಿಸ್​ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Fortis Hospital Doctors team with mother and Son
ತಾಯಿ ಹಾಗೂ ಮಗನೊಂದಿಗೆ ಫೋರ್ಟಿಸ್​ ಆಸ್ಪತ್ರೆಯ ವೈದ್ಯರ ತಂಡ (Etv Bharat)

By ETV Bharat Karnataka Team

Published : Jul 25, 2024, 7:49 PM IST

ಬೆಂಗಳೂರು: ಯಕೃತ್‌ ಕ್ಯಾನ್ಸರ್‌ಗೆ ಒಳಗಾಗಿದ್ದ 52 ವರ್ಷದ ಮಹಿಳೆಗೆ ಸ್ವತಃ ಮಗನೇ ಯಕೃತ್‌ ಭಾಗವನ್ನು ದಾನ ಮಾಡುವ ಮೂಲಕ ತಾಯಿಯ ಜೀವ ಉಳಿಸಿದ್ದಾನೆ. ನಗರದ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕ ಡಾ.ಕಿಶೋರ್ ಜಿ.ಎಸ್‌.ಬಿ ಮತ್ತು ಡಾ.ಪಿಯೂಷ್ ಸಿನ್ಹಾ ಹಾಗೂ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ.ಬಿ.ಎಸ್. ರವೀಂದ್ರ ತಂಡ ಮಹಿಳೆಗೆ ಯಶಸ್ವಿಯಾಗಿ ಯಕೃತ್‌ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಲಿವರ್‌ ಟ್ರಾನ್ಸ್‌ಪ್ಲಾಂಟ್‌ ಸರ್ಜನ್‌ ಡಾ. ಕಿಶೋರ್ ಜಿಎಸ್‌ಬಿ ಮತ್ತು ಡಾ. ಪಿಯೂಷ್ ಸಿನ್ಹಾ, "2021ರಲ್ಲಿ 52 ವರ್ಷದ ಲೀಲಾ ಎಂಬುವವರು ಕಾಮಾಲೆ ಕಾಯಿಲೆಗೆ ತುತ್ತಾಗಿದ್ದರು. ಇದರ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಗಿತ್ತು. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು" ಎಂದು ತಿಳಿಸಿದರು.

"ದೀರ್ಘಕಾಲದಿಂದ ಯಕೃತ್‌ನ ಕಾಯಿಲೆ ಇದ್ದ ಕಾರಣ ಅವರ ಯಕೃತ್‌ನಲ್ಲಿ ದ್ರವದ ಶೇಖರಣೆಯಾಗಿ ಯಕೃತ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದರಿಂದ ಅವರ ಜೀವನ ಶೈಲಿಯ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿತ್ತು. ಅವರನ್ನು ಮತ್ತಷ್ಟು ತಪಾಸಣೆಗೆ ಒಳಪಡಿಸಿದ ಬಳಿಕ ಪಿತ್ತರಸ ನಾಳದಲ್ಲಿ ಕಲ್ಲು ಇರುವುದು ಪತ್ತೆಯಾಯಿತು. ಗ್ಯಾಸ್ಟ್ರೋ ತಂಡವು ಈ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ವೇಳೆ ಆಕೆಗೆ ಯಕೃತ್‌ನ ಕ್ಯಾನ್ಸರ್‌ ಪ್ರಾರಂಭಿಕ ಹಂತದಲ್ಲಿರುವುದು ಸಹ ತಿಳಿದು ಬಂತು. ಹೀಗಾಗಿ ಆಕೆಗೆ ಲಿವರ್ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕೂಡಲೇ ಯಕೃತ್‌ ಕಸಿ ಅಗತ್ಯತೆ ಬಿತ್ತು. ಸ್ವತಃ 31 ವರ್ಷದ ಮಗನೇ ತನ್ನ ಯಕೃತ್‌ನ ಭಾಗವನ್ನು ದಾನ ಮಾಡಲು ಮುಂದಾದರು. ಸಕಾಲದಲ್ಲಿ ಯಕೃತ್‌ ಸಿಕ್ಕ ಪರಿಣಾಮ ಅವರಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು" ಎಂದು ವಿವರಿಸಿದರು.

"ದಾನಿಯ ಯಕೃತ್ತಿನ ಉಳಿದ ಭಾಗವು ತಕ್ಷಣವೇ ಪುನರುತ್ಪಾದಿಸಲು ಪ್ರಾರಂಭಿಸುತ್ತದೆ. ಆರರಿಂದ ಎಂಟು ವಾರಗಳಲ್ಲಿ ಅದರ ಸಾಮಾನ್ಯ ಗಾತ್ರಕ್ಕೆ ಯಕೃತ್‌ ಬೆಳೆಯುತ್ತದೆ. ಹೆಚ್ಚಿನ ಯಕೃತ್‌ ದಾನಿಗಳು ಶಸ್ತ್ರಚಿಕಿತ್ಸೆಯ ಒಂದು ವಾರದ ನಂತರ ಸಾಮಾನ್ಯ ಜೀವನಕ್ಕೆ ಮರಳಬಹುದು" ಎಂದು ಹೇಳಿದರು.

ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ನಿರ್ದೇಶಕ ಡಾ.ಬಿ.ಎಸ್. ರವೀಂದ್ರ ಮಾತನಾಡಿ, "ಯಕೃತ್ತಿನ ಕ್ಯಾನ್ಸರ್ ಅನ್ನು ಸಿ.ಟಿ ಸ್ಕ್ಯಾನ್ ಸ್ಕ್ರೀನಿಂಗ್‌ನಲ್ಲಿ ಪತ್ತೆ ಹಚ್ಚಲಾಯಿತು. ಕೊಲಾಂಜೈಟಿಸ್‌ನೊಂದಿಗೆ ಸಿರೋಟಿಕ್ ರೋಗಿಗೆ ಚಿಕಿತ್ಸೆ ನೀಡುವುದು ಸವಾಲಿನ ಸಂಗತಿಯಾಗಿದೆ. ಜೊತೆಗೆ ಸಾಮಾನ್ಯ ಪಿತ್ತರಸ ನಾಳದಿಂದ ಕಲ್ಲುಗಳನ್ನು ಯಶಸ್ವಿಯಾಗಿ ಹೊರತೆಗೆದು ಸ್ಟೆಂಟ್‌ಗಳನ್ನು ಇರಿಸಲು ಸಾಧ್ಯವಾಯಿತು" ಎಂದು ವಿವರಿಸಿದ್ದಾರೆ.

ಇದನ್ನೂ ಓದಿ:ಕೆಎಲ್ಇ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಕ್ಯಾನ್ಸರ್ ರೋಗಿಗಳಿಗೆ ರೊಬೊಟಿಕ್ ಯಶಸ್ವಿ​​ ಶಸ್ತ್ರಚಿಕಿತ್ಸೆ - Robotic surgery

ABOUT THE AUTHOR

...view details