ಹುಬ್ಬಳ್ಳಿ:ಹುಬ್ಬಳ್ಳಿ ವಿಭಾಗದ ಸೋನಾಲಿಯಂ ಮತ್ತು ದೂಧ್ ಸಾಗರ ನಿಲ್ದಾಣಗಳ ನಡುವೆ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೂಡ್ಸ್ ರೈಲಿನ ವ್ಯಾಗನ್ ಹಳಿತಪ್ಪಿದೆ. ಈ ಘಟನೆಯಿಂದಾಗಿ, ಕೆಳಗಿನ ವಿವರಗಳ ಪ್ರಕಾರ ಪ್ಯಾಸೆಂಜರ್ ರೈಲುಗಳನ್ನು ಮಾರ್ಗ ಬದಲಾವಣೆ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ.
1. 12.09.2024ರಂದು ಪ್ರಾರಂಭವಾಗುವ ರೈಲು ಸಂಖ್ಯೆ 12779 ವಾಸ್ಕೋ ಡ ಗಾಮಾ - ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಪ್ರಯಾಣವನ್ನು ಮಡಗಾಂವ್, ರೋಹಾ, ಪನ್ವೆಲ್, ಪುಣೆ, ದೌಂಡ್ ಕಾರ್ಡ್ ಲೈನ್ ಮತ್ತು ಮನ್ಮಾಡ್ ನಿಲ್ದಾಣಗಳ ಮೂಲಕ ತಿರುಗಿಸಲಾಗುತ್ತದೆ.
2. ರೈಲು ಸಂಖ್ಯೆ 18047 ಶಾಲಿಮಾರ್ - ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ಪ್ರಯಾಣವು 10.09.2024ರಂದು ಪ್ರಾರಂಭವಾಗಿದೆ. ಆದರೆ, ಲೋಂಡಾ ನಿಲ್ದಾಣದಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ. ಹಾಗೂ ಲೋಂಡಾ-ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವಿನ ಸಂಚಾರವು ಭಾಗಶಃ ರದ್ದುಗೊಳ್ಳುತ್ತದೆ.
3. 13.09.2024ರಂದು ಪ್ರಾರಂಭವಾಗುವ ರೈಲು ಸಂಖ್ಯೆ 18048 ವಾಸ್ಕೋ ಡ ಗಾಮಾ - ಶಾಲಿಮಾರ್ ಎಕ್ಸ್‌ಪ್ರೆಸ್ ಪ್ರಯಾಣವು ವಾಸ್ಕೋ ಡ ಗಾಮಾ ಬದಲಿಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡಲಿದೆ. ವಾಸ್ಕೋ ಡ ಗಾಮಾ - ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ.
ಪ್ರಯಾಣಿಕರ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು, ಲೋಂಡಾ ನಿಲ್ದಾಣದಲ್ಲಿ ರೈಲು ಸಂಖ್ಯೆ 18047ರ ಅಂದಾಜು 1,100 ಪ್ರಯಾಣಿಕರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಲೋಂಡಾದಲ್ಲಿಯೇ ಸಿಲುಕಿರುವ ಪ್ರಯಾಣಿಕರನ್ನು ಕರೆದೊಯ್ಯಲು 25 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣ ಪುನಃಸ್ಥಾಪನೆ ತ್ವರಿತಗೊಳಿಸಲು ಅಪಘಾತ ಪರಿಹಾರ ರೈಲನ್ನು ವಾಸ್ಕೋಡಗಾಮಾದಿಂದ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
''GM, AGM ಮತ್ತು ಇತರ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಸಂಚಾರ ಮರುಸ್ಥಾಪನೆ ಪ್ರಗತಿಯಲ್ಲಿದೆ. ಮುಂದೆ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇದ್ದರೆ ಸೂಚನೆ ನೀಡಲಾಗುವುದು'' ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಕಲುಷಿತ ತಿಪ್ಪಗೊಂಡನಹಳ್ಳಿ ಡ್ಯಾಂ ಬಗ್ಗೆ ಚರ್ಚೆಗೆ ಸಭೆ ನಡೆಸುವಂತೆ ಸಿಎಂಗೆ ಸಚಿವ ಖಂಡ್ರೆ ಆಗ್ರಹ - Thippagondanahalli Dam