ಕರ್ನಾಟಕ

karnataka

ETV Bharat / state

ನನ್ನ ಮಗಳು ಗಂಡನನ್ನು ಕಳೆದುಕೊಂಡು ನೋವಿನಲ್ಲಿದ್ದಾಳೆ; ಮೃತ ರೇಣುಕಾಸ್ವಾಮಿ ಮಾವ ಸೋಮನಾಥಯ್ಯ - Somanathaiah

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್​ ಶೀಟ್​ ಸಲ್ಲಿಕೆ ಬಳಿಕ ನಟ ದರ್ಶನ್​ ಮತ್ತು ಅವರ ಸಹಚರರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ರೇಣುಕಾಸ್ವಾಮಿಯ ಮಾವ ಸೋಮನಾಥಯ್ಯ ಅವರು ಜಾಲತಾಣದಲ್ಲಿ ವೈರಲ್ ಆದ ಫೋಟೋ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ.

somanathaiah
ಮೃತ ರೇಣುಕಾಸ್ವಾಮಿ ಮಾವ ಸೋಮನಾಥಯ್ಯ (ETV Bharat)

By ETV Bharat Karnataka Team

Published : Sep 5, 2024, 3:37 PM IST

Updated : Sep 5, 2024, 5:47 PM IST

ಮೃತ ರೇಣುಕಾಸ್ವಾಮಿ ಮಾವ ಸೋಮನಾಥಯ್ಯ (ETV Bharat)

ದಾವಣಗೆರೆ :ನನ್ನ ಮಗಳು ಗಂಡನನ್ನು ಕಳೆದುಕೊಂಡಿದ್ದಾಳೆ, ಅವಳಿಗೆ ಸರಿಯಾದ ನ್ಯಾಯ ಸಿಗಬೇಕು. ಸರ್ಕಾರ ಅವಳಿಗೆ ಕೆಲಸ ಕೊಡುವುದಾಗಿ ಹೇಳಿದೆ. ಅವಳಿಗೆ ಒಳ್ಳೆಯದನ್ನು ಮಾಡಬೇಕು. ಸರ್ಕಾರದ ಬಳಿ ಇಷ್ಟೇ ನಮ್ಮ ಮನವಿ ಎಂದು ಕೊಲೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಮಾವ ಸೋಮನಾಥಯ್ಯ ಹೇಳಿದ್ದಾರೆ.

ಜಿಲ್ಲೆಯ ಹರಿಹರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಆರೋಪಿತರಿಗೆ ಶಿಕ್ಷೆಯಾಗಲು ಪೊಲೀಸರು ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಎಲ್ಲ ಚೆನ್ನಾಗಿ ಮಾಡಿದ್ದಾರೆ. ಇಲ್ಲಿಯವರೆಗೂ ಒಳ್ಳೆಯದೆ ಆಗಿದೆ. ಮುಂದೆನೂ ಸಹಕಾರ ಕೊಡ್ತಾರೆ ಅನ್ನೋ ನಂಬಿಕೆ ಇದೆ ಎಂದರು.

ಇವತ್ತು ವೈರಲ್ ಆದ ಫೋಟೋ ನೋಡಿದ್ವಿ. ತುಂಬ ಬೇಸರ ಆಯಿತು. ಅವನಿಗೆ ಬುದ್ಧಿ ಮಾತು ಹೇಳಿ ಕಳುಹಿಸಬೇಕಿತ್ತು. ಇಲ್ಲಿ ನಾವು ಬುದ್ಧಿ ಹೇಳ್ತಾ ಇದ್ವಿ, ಆತ ಕೇಳ್ತಾ ಇದ್ದ. ಒಳ್ಳೆ ಹುಡುಗ ಇದ್ದ, ನಮ್ಮ ಮಾತು ಕೇಳ್ತಾ ಇದ್ದ. ಹೆಂಡತಿ ಮಕ್ಕಳ ಮುಖ ನೋಡಿಕೊಂಡು ಸುಧಾರಣೆ ಆಗ್ತಾ ಇದ್ದ. ಅವನನ್ನು ಬಿಟ್ಟು ಕಳುಹಿಸಿದ್ರೆ ನಮಗೆ ಮತ್ತು ಅವರಿಗೆ ಇಬ್ಬರಿಗೂ ಒಳ್ಳೆದು ಆಗ್ತಾ ಇತ್ತು. ಆ ಘಟನೆಯಿಂದ ನನ್ನ ಮಗಳು ಸಾಕಷ್ಟು ನೊಂದಿದ್ದಾಳೆ. ಆ ಘಟನೆಯಿಂದ ನನ್ನ ಮಗಳು ಇನ್ನೂ ಹೊರಗೆ ಬಂದಿಲ್ಲ. ಈಗ ತುಂಬು ಗರ್ಭಿಣಿ ಬೇರೆ. ಮದುವೆ ಆಗಿ ಕೇವಲ 10 ತಿಂಗಳು ಸಂಸಾರ ಮಾಡಿದ್ದ. ಮಗಳಿಗೆ ಇನ್ನೂ ಚಿಕ್ಕ ವಯಸ್ಸು ಎಂದು ತಂದೆ ಸೋಮನಾಥಯ್ಯ ಭಾವುಕರಾದರು.

ಘಟನೆಯಿಂದ ಮಗುವಿನ ಬೆಳವಣಿಗೆಯಲ್ಲಿ ವ್ಯತ್ಯಾಸ ಆಗಿತ್ತು. ರಕ್ತ ಕಡಿಮೆ ಆಗಿ ಅನಾರೋಗ್ಯ ಉಂಟಾಗಿತ್ತು. ಒಳ್ಳೆ ಚಿಕಿತ್ಸೆ ಕೊಡಿಸಿದ್ದಾರೆ. ಈಗ ಕ್ರಮೇಣ ಆರೋಗ್ಯ ಸುಧಾರಣೆ ಆಗ್ತಾ ಇದೆ. ಎರಡು ತಿಂಗಳಲ್ಲಿ ಹೆರಿಗೆ ಆಗಲಿದೆ. ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದಾರೆ. ಮಗಳ ಮುಂದಿನ ಜೀವನಕ್ಕೆ ಆಧಾರ ಮಾಡಿಕೊಡುವಂತೆ ಸರ್ಕಾರಕ್ಕೆ ಸೋಮನಾಥಯ್ಯ ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ:ಚಿತ್ರದುರ್ಗದ ರೇಣುಕಾಸ್ವಾಮಿ ನಟ ದರ್ಶನ್​ ಅವರ ಅಭಿಮಾನಿಯಾಗಿದ್ದ. ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಮತ್ತು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಳುಹಿಸಿ ಅನುಚಿತವಾಗಿ ವರ್ತಿಸಿದ್ದ ಎಂದು ಆರೋಪಿಸಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸ್ನೇಹಿತನಾದ ನಟ ದರ್ಶನ್​ ಅವರಿಗೆ ಪವಿತ್ರಾ ಗೌಡ ಈ ವಿಷಯ ತಿಳಿಸಿದ್ದರು. ಬಳಿಕ ದರ್ಶನ್​ ಅಭಿಮಾನಿ ಬಳಗದ ಚಿತ್ರದುರ್ಗದ ಜಿಲ್ಲಾಧ್ಯಕ್ಷ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಕಿಡ್ನಾಪ್​ ಮಾಡಿಸಿ, ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಪಟ್ಟಣಗೆರೆ ಶೆಡ್​ನಲ್ಲಿ ಆತನನ್ನು ಕೂಡಿಹಾಕಿ ಹಲ್ಲೆ ನಡೆಸಿದ್ದರಿಂದ ಆತ ಮೃತಪಟ್ಟಿರುವುದಾಗಿ ದೂರು ದಾಖಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದಲ್ಲಿ ನಟ ದರ್ಶನ್​, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಜನ ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ :ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಚಾರ್ಜ್​ಶೀಟ್​ನಲ್ಲಿ ದರ್ಶನ್ A2 ಆರೋಪಿಯಾಗಿ ಮುಂದುವರಿಕೆ - Darshan continue as A2 accused

Last Updated : Sep 5, 2024, 5:47 PM IST

ABOUT THE AUTHOR

...view details