ಮಂಗಳೂರು:ಮಂಗಳೂರಿನ ಎಸ್ಇಝಡ್ ಮತ್ತು ಇಟಲಿಯ ಎಂಐಆರ್ ಇಂದು ಮಂಗಳೂರಿಗೆ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಹೊಸ ಕಾನ್ಸೆಪ್ಟ್ ಪರಿಚಯಿಸುವ ಬಗೆಗೆ ಇಒಐ (exchange of expression of interest) ಒಪ್ಪಂದ ಮಾಡಿಕೊಂಡಿದೆ.
ಇಟಲಿಯ ಎಂಐಆರ್ ಸಂಸ್ಥೆಯು ಸೋಲಾರ್ ಪ್ಯಾನೆಲ್ಗಳನ್ನು ಭಿನ್ನ ಮಾದರಿಯಲ್ಲಿ ಉತ್ಪಾದಿಸುವ ಸಂಸ್ಥೆಯಾಗಿದೆ. ಸೋಲಾರ್ ಪ್ಯಾನೆಲ್ ಅನ್ನು ರೂಪ್ ಟಾಪ್ನಲ್ಲಿ ಅಳವಡಿಸಲು ಸಾಂಪ್ರಾದಾಯಿಕ ವಿಧಾನದ ಬದಲಿಗೆ ರೂಪ್ ಟಾಪ್ನ್ನು ಸೋಲಾರ್ ಪ್ಯಾನೆಲ್ಗಳಿಂದ ನಿರ್ಮಿಸುವುದು, ಗೋಡೆಗಳನ್ನು ಸೋಲಾರ್ ಪ್ಯಾನೆಲ್ಗಳಿಂದ ನಿರ್ಮಿಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ. ಇದಕ್ಕಾಗಿ ಗ್ರ್ಯಾನೆಟ್ ತರಹ ಕಾಣುವ ಸೋಲಾರ್ ಪ್ಯಾನೆಲ್ಗಳನ್ನು ಅದು ಉತ್ಪಾದಿಸುತ್ತಿದೆ. ಈ ರೀತಿಯ ನೂರಕ್ಕೂ ಅಧಿಕ ಕಟ್ಟಡಗಳನ್ನು ಎಂಐಆರ್ ಗ್ರೂಪ್ ಮಾಡಿದೆ.
ಮನೆಯ ಗೋಡೆಯಲ್ಲಿಯೂ ಸೋಲಾರ್ ವಿದ್ಯುತ್ ಉತ್ಪಾದಿಸಬಹುದು (ETV Bharat) ಬ್ಯಾಕ್ ಟು ಊರು:ಈ ಸಂಸ್ಥೆಯು ಮಂಗಳೂರಿಗೆ ಬರಲು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ವಿಶೇಷ ಪ್ರಯತ್ನ ನಡೆಸಿದ್ದರು. ಬ್ಯಾಕ್ ಟು ಊರು ಎಂಬ ಕಲ್ಪನೆಯಲ್ಲಿ ಮಂಗಳೂರಿನಿಂದ ತೆರಳಿ ವಿದೇಶದಲ್ಲಿ ಉನ್ನತ ಸ್ಥಾನದಲ್ಲಿರುವವರ ಮೂಲಕ ಮಂಗಳೂರಿಗೆ ಕೊಡುಗೆಯನ್ನು ನೀಡುವಂತೆ ಇಟಲಿಯ ಎಂಐಆರ್ ಗ್ರೂಪ್ ಜೊತೆಗೆ ಮಾತುಕತೆ ನಡೆದಿದೆ. ಎಂಐಆರ್, ಡೈರೆಕ್ಟರ್ ಮತ್ತು ಆರ್ಕಿಟೆಕ್ ಆಗಿರುವವರು ಮಂಗಳೂರಿನ ನಿತಿನ್ ರತ್ನಾಕರ್. ಅವರನ್ನು ಸಂಪರ್ಕಿಸಿ ಎಂಐಆರ್ ಮಂಗಳೂರಿನಲ್ಲಿ ಉದ್ಯಮ ಆರಂಭಿಸುವ ಪ್ರಯತ್ನ ಮಾಡಲಾಯಿತು. ಅದರಂತೆ ಮಂಗಳೂರಿನ ಎಸ್ಇಝಡ್ ಜೊತೆಗೆ ಇಓಐ ಮಾಡಿಕೊಳ್ಳಲಾಗಿದೆ.
ಒಪ್ಪಂದದ ವೇಳೆ ಎಂಐಆರ್ ಗ್ರೂಪ್ ಸಿಇಒ ರಫೇಲ್ ಮರಜೊ, ಡೈರೆಕ್ಟರ್ ಮತ್ತು ಆರ್ಕಿಟೆಕ್ ನಿತಿನ್ ರತ್ನಾಕರ್, ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತು ಎಂಎಸ್ಇಝಡ್ನ ಸೂರ್ಯನಾರಾಯಣ ಉಪಸ್ಥಿತರಿದ್ದರು.
ಆರ್ಕಿಟೆಕ್ ನಿತಿನ್ ರತ್ನಾಕರ್ ಹೇಳುವುದಿಷ್ಟು:ಎಂಐಆರ್, ಡೈರೆಕ್ಟರ್ ಮತ್ತು ಆರ್ಕಿಟೆಕ್ ನಿತಿನ್ ರತ್ನಾಕರ್ ಮಾತನಾಡಿ, "ಕಟ್ಟಡವನ್ನು ವಿದ್ಯುತ್ ಉತ್ಪಾದನೆ ಕಟ್ಟಡ ಮಾಡುವ ಯೋಜನೆ ಇದು. ರೂಪ್ನಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸುವುದು ಗೊತ್ತಿದೆ. ಆದರೆ ಇಲ್ಲಿ ಬಿಲ್ಡಿಂಗ್ನಲ್ಲಿ ಉಪಯೋಗಿಸುವ ವಸ್ತುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇಟಲಿಯಲ್ಲಿ 120 ಕಟ್ಟಡ ನಿರ್ಮಿಸಿ ಅಲ್ಲಿ ವಿದ್ಯುತ್ ಉತ್ಪಾದನೆ ಮಾಡಿರುವ ಕಾನ್ಸೆಪ್ಟ್ ನಮ್ಮ ಭಾರತಕ್ಕೆ ತರುವ ಪ್ರಯತ್ನ. ರೂಪ್ನ್ನು ಸೋಲಾರ್ ಪ್ಯಾನೆಲ್ ಮಾಡುವುದು ನಮ್ಮ ಯೋಜನೆ. ಜನರಿಗೆ ಬೇಕಾದಂತೆ ಕಾಂಕ್ರೀಟ್, ಗ್ರಾನೆಟ್ ರೂಪದಲ್ಲಿ ಸೋಲಾರ್ ಪ್ಯಾನೆಲ್ ತಯಾರಿಸುತ್ತೇವೆ. 5 ಸ್ಕ್ವಾರ್ ಮೀ ಇರುವ ಇದು 1 ಕಿಲೋ ವ್ಯಾಟ್ ವಿದ್ಯುತ್ ತಯಾರಿಸಬಹುದು. ಈ ಇಟಲಿಯ ತಂತ್ರಜ್ಞಾನವನ್ನು ಭಾರತಕ್ಕೆ ತಂದು ಜನರಿಗೆ ಮುಟ್ಟಿಸುವ ಕಾರ್ಯ ನಡೆಯಲಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಸಂಸ್ಥೆಯು 1,500 ಕೋಟಿ ಹೂಡಿಕೆ ಮಾಡಲಿದೆ" ಎಂದರು.
ಯೋಜನೆ ಬಗ್ಗೆ ಸಂಸದರ ಮಾತಿದು:ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, "ನಿತಿನ್ ರತ್ನಾಕರ್ ಅವರ ಮೂಲಕ ಎಂಐಆರ್ ಗ್ರೂಪ್ ಜೊತೆಗೆ ಎಂಎಸ್ಇಝಡ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಂಐಆರ್ ಮಂಗಳೂರಿನಲ್ಲಿ ಹೂಡಿಕೆ ಮಾಡಲು ಇಚ್ಛೆ ವ್ಯಕ್ತಪಡಿಸಿದೆ. ಬ್ಯಾಕ್ ಟು ಊರು ಕಲ್ಪನೆಯಲ್ಲಿ ಈ ಹೂಡಿಕೆಯಾಗುತ್ತಿರುವುದು ಸಂತಸ ತಂದಿದೆ" ಎಂದರು.
ಇದನ್ನೂ ಓದಿ:ಬಾಲ್ಕನಿಯಲ್ಲಿ ಸೌರ ಫಲಕ ಅಳವಡಿಸಿ 100 ಯುನಿಟ್ ವಿದ್ಯುತ್ ಉತ್ಪಾದಿಸುವ ಯೋಜನೆ: ಇದರ ವೆಚ್ಚ ಕೇವಲ 50 ಸಾವಿರ! - HOW TO USE BALCONY SOLAR SYSTEM