ಮೈಸೂರು:ಇದು ನನ್ನ ಹೋರಾಟಕ್ಕೆ ಸಂದ ಜಯ. ಈ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಮೇಲೆ ಇ.ಡಿ. ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ದೂರುದಾರರಾದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರನ್ನು ಗುರಿಯಾಗಿಸಿ ನಾನು ದೂರು ನೀಡಿಲ್ಲ. ಒಟ್ಟಾರೆ ಮುಡಾದಲ್ಲಿ ನಡೆದಿರುವ ಭ್ರಷ್ಟಚಾರವನ್ನು ಬಯಲಿಗೆಳೆಯುವಂತೆ ದೂರು ನೀಡಿದ್ದೇನೆ ಎಂದರು.
ಸ್ನೇಹಮಯಿ ಕೃಷ್ಣ (ETV Bharat) ಇ.ಡಿ.ಯಿಂದ ದಾಖಲೆಗಳ ಪರಿಶೀಲನೆ: ಇಂದು ಬೆಳಗ್ಗೆ 11 ಗಂಟೆಗೆ ಇ.ಡಿ. ಅಧಿಕಾರಿಗಳು ಮುಡಾ ಕಚೇರಿಗೆ ಆಗಮಿಸಿದ್ದು, ರಾತ್ರಿ 9 ಗಂಟೆಯ ವೇಳೆಗೂ ದಾಖಲೆಗಳ ಪರಿಶೀಲನೆ ಮುಂದುವರೆದಿತ್ತು.
ಮತ್ತೊಂದೆಡೆ, ಮೈಸೂರು ತಾಲೂಕು ಕಚೇರಿಗೂ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದು, ಮೂಲ ಜಮೀನಿನ ಮಾಲೀಕರು ಯಾರು?, ಯಾರಿಗೆ ಮಾರಾಟವಾಗಿದೆ?, ಆ ನಂತರ ಮುಡಾ ಯಾವ ರೀತಿ ಅದನ್ನು ಪಡೆದುಕೊಂಡಿತು ಎಂಬೆಲ್ಲಾ ವಿಚಾರಗಳ ಮಾಹಿತಿಯನ್ನು ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಪಡೆಯುತ್ತಿದ್ದಾರೆ. ಮುಡಾದ ದಾಖಲಾತಿ ಪತ್ರಗಳನ್ನು ಮುಡಾ ಆಯುಕ್ತರಿಂದ ಹಾಗೂ ದಾಖಲಾತಿ ವಿಭಾಗದ ನೌಕರರಿಂದ ಅಧಿಕಾರಿಗಳು ಪಡೆದು ಪರಿಶೀಲನೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಮುಖ್ಯಮಂತ್ರಿಗಳನ್ನ ವಿಚಾರಣೆಗೆ ಒಳಪಡಿಸಿ; ಸ್ನೇಹಮಯಿ ಕೃಷ್ಣ ಮನವಿ