ರಾಜ್ಯ ಬಜೆಟ್: ಮೈಸೂರು ಕೈಗಾರಿಕಾ ಸಂಘಗಳ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮಾತನಾಡಿದರು. ಮೈಸೂರು: "ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಅದರಲ್ಲೂ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು" ಎಂದು ಮೈಸೂರು ಕೈಗಾರಿಕಾ ಸಂಘಗಳ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ 'ಈಟಿವಿ ಭಾರತ್'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
"ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಸಿಎಂ ಸಿದ್ದರಾಮಯ್ಯನವರು ಪೂರ್ವಭಾವಿ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ್ದು ಮಧ್ಯಂತರ ಬಜೆಟ್. ಸಿದ್ದರಾಮಯ್ಯ ಸರ್ಕಾರ ಮಂಡಿಸುತ್ತಿರುವುದು ಪೂರ್ಣಾವಧಿ ಬಜೆಟ್. ಅವರು ಏನು ಹೇಳುತ್ತಾರೋ ಅದನ್ನು ಮಾಡಬಹುದು. ಅವರಿಗೆ ಪೂರ್ಣ ಪ್ರಮಾಣದ ಅಧಿಕಾರ ಇದೆ. ಹಣಕಾಸಿನ ವ್ಯವಸ್ಥೆಯೂ ಇದೆ" ಎಂದು ತಿಳಿಸಿದರು.
"ಬೆಂಗಳೂರು ಬಿಟ್ಟರೆ ಮೈಸೂರು ವೇಗವಾಗಿ ಬೆಳೆಯುತ್ತಿರುವ ಎರಡನೇ ಜಿಲ್ಲೆ. ಇಲ್ಲಿನ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದ ಹಾಗೆ ಒಂದು ಸುಸಜ್ಜಿತ, ಅಂತಾರಾಷ್ಟ್ರೀಯ ಮಟ್ಟದ ಸಮುದಾಯ ಭವನ ನಿರ್ಮಾಣವಾಗಬೇಕು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂದು ಬರುತ್ತಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಹಲವಾರು ಸಂಸ್ಥೆಗಳಿವೆ. ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಮಾಡಬೇಕಾದರೆ ಒಂದು ಅಂತಾರಾಷ್ಟ್ರೀಯ ಮಟ್ಟದ ಸಮುದಾಯ ಭವನ ಬೇಕು" ಎಂದರು.
ರಫ್ರು ಕೇಂದ್ರ ಸ್ಥಾಪನೆಗೆ ಅನುದಾನ ನಿರೀಕ್ಷೆ: "ಮುಖ್ಯಮಂತ್ರಿಗಳು ತಮ್ಮ ಹಿಂದಿನ ಅವಧಿಯ ಕೊನೆಯ ಬಜೆಟ್‌ನಲ್ಲಿ ಒಂದು ಕೋಟಿ ಅನುದಾನ ಕೊಟ್ಟು ಮೈಸೂರನ್ನು ಸುಸಜ್ಜಿತ ರಫ್ತು ಕೇಂದ್ರ ಮಾಡಬೇಕು ಎಂದಿದ್ದರು. ಆದರೆ ಅವರ ನಂತರ ಬಂದಂತಹ ಸರ್ಕಾರ ಆ ಕಟ್ಟಡವನ್ನು ಅರ್ಧಕ್ಕೆ ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರಫ್ತು ಕೇಂದ್ರಕ್ಕೆ ಅಗತ್ಯವಾದಂತಹ 1 ಕೋಟಿ ರೂಪಾಯಿ ಪರಿಹಾರ ನೀಡಿ, ಕಟ್ಟಡ ಕಾಮಗಾರಿಯನ್ನು ಪುನರಾರಂಭಿಸಬೇಕು ಎಂದು ಕೇಳಿಕೊಳ್ಳುತ್ತೇವೆ. ಮೈಸೂರಿನ ಕೈಗಾರಿಕಾ ಕ್ಲಸ್ಟರ್ಗಳಿಗೆ ಕೇಂದ್ರ ಸರ್ಕಾರದಿಂದ 15 ರಿಂದ 20 ಕೋಟಿ ರೂ ಅನುದಾನ ಇದೆ. ಆ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು" ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಿಂಟಿಂಗ್ ಕ್ಲಸ್ಟರ್ ಸ್ಥಾಪನೆ ಮಾಡಬೇಕು: "ಈ ಹಿಂದೆ ಮೈಸೂರಿಗೆ ಸಿದ್ದರಾಮಯ್ಯನವರು ಹಲವು ಕೊಡುಗೆಗಳನ್ನು ನೀಡಿದ್ದಾರೆ. ಹಾಗೆಯೇ ಈ ಬಾರಿಯೂ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲೂ ವಿಶೇಷವಾಗಿ ಶಿವರಾಂಪೇಟೆಯಲ್ಲಿ ಪ್ರಿಂಟಿಂಗ್ ಕ್ಲಸ್ಟರ್ ಸ್ಥಾಪನೆ ಮಾಡಬೇಕು. ಅದಕ್ಕೆ ಬೇಕಾದಂತಹ ಜಾಗವನ್ನು ಸರ್ಕಾರ ಉಚಿತವಾಗಿ ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ. ಇದನ್ನು ಮಾಡುವುದರಿಂದ ಮೈಸೂರಿನಲ್ಲಿ ಇರುವ 250ರಿಂದ 300 ಪ್ರಿಂಟಿಂಗ್ ಕಂಪನಿಯವರಿಗೆ ಅನುಕೂಲ ಆಗುತ್ತದೆ. ಜೊತೆಗೆ ಅದರ ಅವಶ್ಯಕತೆಯೂ ಸಹ ಈಗ ಮೈಸೂರಿಗಿದೆ. ಆದ್ದರಿಂದ ಪ್ರಿಂಟಿಂಗ್ ಕ್ಲಸ್ಟರ್ ಸ್ಥಾಪನೆಗೆ ಅನುದಾನ ನೀಡಬೇಕು" ಎಂದು ಜೈನ್ ತಿಳಿಸಿದರು.
"ಮೈಸೂರಿನಲ್ಲಿ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಮೈಸೂರು ಕೈಗಾರಿಕಾ ಪ್ರದೇಶ ಮಾಡಿದರು. ಅದು 6,500 ಎಕರೆಗಳಲ್ಲಿ ವಿಸ್ತರಿಸಿದೆ. ಆದರೆ ಅಲ್ಲಿರುವ ಕೈಗಾರಿಕೋದ್ಯಮಿಗಳು ಹೂಟಗಳ್ಳಿ ನಗರ ಸಭೆಗೆ ಟ್ಯಾಕ್ಸ್ ಕಟ್ಟುತ್ತಾರೆ. ಕೆಐಎಡಿಬಿಗೂ ಸಹ ಟ್ಯಾಕ್ಸ್ ಕಟ್ಟುತ್ತಾರೆ. ಪಾಲಿಕೆಯವರಿಗೂ ಹಣ ನೀಡುತ್ತಿದ್ದಾರೆ. ಆದ್ದರಿಂದ ಕಾರ್ಖಾನೆಯ ಮಾಲೀಕರಿಗೆ ಗೊಂದಲ ಮತ್ತು ಕಿರಿಕಿರಿ ಉಂಟಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ನೀಡಬೇಕು" ಎಂದರು.
ಕೈಗಾರಿಕಾ ಕ್ಲಸ್ಟರ್ ನಿರ್ಮಾಣಕ್ಕೆ ಅನುದಾನ:"2003ರಲ್ಲಿ ರಾಜ್ಯ ಸರ್ಕಾರ ಸಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಒಂದೇ ಜಾಗದಲ್ಲಿ ಇರುವ ಕೈಗಾರಿಕಾ ಪ್ರದೇಶಗಳಿಗೆ, ಕೈಗಾರಿಕೆಗಳಿಗೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚಿಸಬೇಕು. ಈ ಘೋಷಣೆಯ ಜೊತೆಗೆ, ಆಯುಕ್ತರು, ಸಿಬ್ಬಂದಿ ನೇಮಕ ಮಾಡಬೇಕು. ಈಗಾಗಲೇ ಕೈಗಾರಿಕೆಯವರು ಪರಿತಪಿಸುತ್ತಿದ್ದೇವೆ. ಇವುಗಳನ್ನು ಮಾಡಿದರೆ ಮುಂದಿನ ದಿನಗಳಲ್ಲಿ ಮೈಸೂರು ಉತ್ತಮ ಅಭಿವೃದ್ಧಿ ಹೊಂದುತ್ತದೆ".
"ಭವಿಷ್ಯಕ್ಕೆ ಇವೆಲ್ಲಾ ತುಂಬಾ ಅನುಕೂಲವಾಗಿರುತ್ತದೆ. ಸಾಮಾನ್ಯವಾಗಿ ಬಜೆಟ್ ಮಂಡನೆ ಮಾಡುವುದಕ್ಕೆ ಮುಂಚೆ ನಮ್ಮನ್ನು ಕರೆದು ಪೂರ್ವಭಾವಿ ಸಭೆ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಸಭೆ ನಡೆಸಿಲ್ಲ. ಮುಂದಿನ ಬಜೆಟ್ಗೆ ಕರೆಯಬಹುದು. ಈ ಹಿಂದೆ ಮೈಸೂರಿಗೆ ಸಿದ್ದರಾಮಯ್ಯ ಬಂದಾಗ, ಅವರ ಮನೆಯಲ್ಲೇ ತಮ್ಮ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಖಂಡಿತವಾಗಿ ಈ ಬಾರಿ ಬಜೆಟ್‌ನಲ್ಲಿ ಪ್ರಾಧಾನ್ಯತೆ ನೀಡಬಹುದು ಎಂದು ನಿರೀಕ್ಷಿಸಬಹುದು" ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯ ಬಜೆಟ್ 2024: ಬೆಂಗಳೂರು ನಗರಕ್ಕಿವೆ ಬೆಟ್ಟದಷ್ಟು ನಿರೀಕ್ಷೆಗಳು