ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿರುವ ವಿದ್ಯುತ್ ಸಬ್ಸ್ಟೇಷನ್ಗಳ ಜಾಗದಲ್ಲಿ ಮಾಲ್ ಸೇರಿದಂತೆ ಗಗನಚುಂಬಿ ಕಟ್ಟಡಗಳು ತಲೆ ಎತ್ತಲಿವೆ. ಪಿಪಿಪಿ ಮಾದರಿಯಲ್ಲಿ ಸಬ್ಸ್ಟೇಷನ್ಗಳನ್ನು ಭೂಗತಗೊಳಿಸಿ ಅದರ ಮೇಲೆ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ಇಂಧನ ಇಲಾಖೆ ಮುಂದಾಗಿದೆ. ಈ ಪ್ರಸ್ತಾಪ ಅಂತಿಮಗೊಂಡರೆ ನಗರದ ವಿದ್ಯುತ್ ಸಬ್ ಸ್ಟೇಷನ್ಗಳೆಲ್ಲಾ ಕಮರ್ಷಿಯಲ್ ಕಾರಿಡಾರ್ಗಳಾಗಲಿವೆ.
ಮುಂಬರಲಿರುವ ದಿನಗಳಲ್ಲಿ ಬೆಂಗಳೂರಿನ ವಿದ್ಯುತ್ ಬೇಡಿಕೆ ಪೂರೈಕೆಗೆ ವಿದ್ಯುತ್ ಸಬ್ಸ್ಟೇಷನ್ ಕೊರತೆ ತಪ್ಪಿಸಲು ಈಗಿರುವ ಸಬ್ಸ್ಟೇಷನ್ಗಳನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಂಡರ್ ಗ್ರೌಂಡ್ ಸಬ್ ಸ್ಟೇಷನ್ಗಳಾಗಿ ಪರಿವರ್ತಿಸಿ, ಆ ಜಾಗವನ್ನು ಡೆವಲಪರ್ಗಳಿಗೆ ಗುತ್ತಿಗೆ ನೀಡುವ ಚಿಂತನೆ ಮಾಡಿದ್ದು, ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದ ನಂತರ, ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದಿಡಲಾಗುತ್ತದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ವಿನೂತನ ಪ್ರಯೋಗವನ್ನು ನಮ್ಮ ಇಂಧನ ಇಲಾಖೆ ಮಾಡುತ್ತಿದೆ. ಸಂಪುಟಕ್ಕೆ ಪ್ರಸ್ತಾವನೆ ಕಳಿಸುವ ಮೊದಲು ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ. ಬೆಂಗಳೂರಿನಲ್ಲಿ ವಿದ್ಯುತ್ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದೆ. ಇವಿ ವಾಹನ ಬಂದಷ್ಟು ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದರು.
ಹೆಚ್ಚುವರಿ ವಿದ್ಯುತ್ ಸರಬರಾಜು ಮಾಡಲು ಮತ್ತಷ್ಟು ಸಬ್ ಸ್ಟೇಷನ್ಗಳು ಬೇಕು. ಆದರೆ ಈಗ ಹೊಸದಾಗಿ ಸಬ್ ಸ್ಟೇಷನ್ ಸ್ಥಾಪಿಸಲು ನಮ್ಮಲ್ಲಿ ಸ್ಥಳ ಇಲ್ಲ. ಆದರೆ ಸದ್ಯ ನಮ್ಮಲ್ಲಿ ಪ್ರೈಮ್ ಲ್ಯಾಂಡ್ಗಳು ಇವೆ. ಆನಂದರಾವ್ ವೃತ್ತದಲ್ಲಿ ಐದು ಎಕರೆ ಇದೆ. ಆ ರೀತಿ ಇನ್ನು ಹಲವು ಕಡೆ ಸಬ್ ಸ್ಟೇಷನ್ಗಳಿವೆ. ಅಲ್ಲಿನ ಸಬ್ ಸ್ಟೇಷನ್ಗಳನ್ನು ಅಂಡರ್ ಗ್ರೌಂಡ್ ಮಾಡಬೇಕು. ಈಗಾಗಲೇ ಹಲವು ದೇಶದಲ್ಲಿ ಈ ರೀತಿ ಅಂಡರ್ ಗ್ರೌಂಡ್ ಸಬ್ ಸ್ಟೇಷನ್ ಮಾಡುವ ಕಾರ್ಯ ಆಗಿದೆ.
ಆ ರೀತಿ ಮಾಡಲು ಯೋಚಿಸುತ್ತಿದ್ದೇವೆ. ಪಿಪಿಪಿ ಮಾದರಿಯಲ್ಲಿ ಸಬ್ ಸ್ಟೇಷನ್ ಜಾಗವನ್ನು ಡೆವಲಪರ್ಗಳಿಗೆ 35 ವರ್ಷ ಗುತ್ತಿಗೆ ಆಧಾರದಲ್ಲಿ ನೀಡಲಿದ್ದೇವೆ. ಡೆವಲಪರ್ಗಳು ಅಲ್ಲಿ ಹೂಡಿಕೆ ಮಾಡಲಿದ್ದಾರೆ. ನಮ್ಮ ಸಬ್ ಸ್ಟೇಷನ್ ಅಂಡರ್ ಗ್ರೌಂಡ್ ಮಾಡಿ, ಅದರ ಮೇಲೆ ವಾಣಿಜ್ಯ ಕಟ್ಟಡ ನಿರ್ಮಿಸಿಕೊಳ್ಳಬಹುದು. ಈ ಪ್ರಸ್ತಾವನೆ ಕುರಿತು ಅಭಿಪ್ರಾಯ ಸಂಗ್ರಹಿಸಿ ನಂತರ ಸಂಪುಟದ ಮುಂದಿಡಲಿದ್ದೇವೆ ಎಂದರು.
ಈಗಿರುವ ಸಬ್ ಸ್ಟೇಷನ್ಗಳು ಹಳೆಯ ತಂತ್ರಜ್ಞಾನ ಮತ್ತು ಉಪಕರಣದ್ದಾಗಿವೆ. ಅವುಗಳನ್ನು ಹೊಸ ತಂತ್ರಜ್ಞಾನಕ್ಕೆ ಪರಿವರ್ತಿಸಿದಲ್ಲಿ ಹೆಚ್ಚುವರಿ ವಿದ್ಯುತ್ ಸರಬರಾಜು ಮಾಡುವ ಸಾಮರ್ಥ್ಯ ಹೊಂದಲಿವೆ. ಇದರಿಂದಾಗಿ ಹೊಸ ಸಬ್ ಸ್ಟೇಷನ್ ಸ್ಥಾಪಿಸುವ ಸಮಸ್ಯೆ ತಪ್ಪಲಿದೆ. ಬೇಡಿಕೆಯಂತೆ ವಿದ್ಯುತ್ ಪೂರೈಕೆಯನ್ನೂ ಮಹಾನಗರಕ್ಕೆ ಮಾಡಲು ಸಾಧ್ಯವಾಗಲಿದೆ. ಹಾಗಾಗಿ ಈ ಚಿಂತನೆ ಮಾಡಿದ್ದೇವೆ ಎಂದು ತಿಳಿಸಿದರು.
ಹಿಂದೆ ಸ್ಟೀಲ್ ಬ್ರಿಡ್ಜ್ ಮಾಡಲು ಹೋದಾಗ ವಿರೋಧ ಬಂತು. ಯೋಜನೆ ಕುರಿತು ಎಲ್ಲಾ ಮುಗಿಸಿ ಅನುಮೋದನೆ ಪಡೆದ ನಂತರ ಜನರ ಮುಂದೆ ಬಂದಾಗ ವಿರೋಧ ಬಂದಿತ್ತು. ಹಾಗಾಗಿ ಈಗ ಮೊದಲೇ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ದೇಶದಲ್ಲಿ ನಾವೇ ಮೊದಲು ಅಂಡರ್ ಗ್ರೌಂಡ್ ಜಿಐಎಸ್ ಸ್ಟೇಷನ್ ಮಾಡುತ್ತಿರುವುದು. ಶಿವನಸಮುದ್ರದಲ್ಲಿ ದೇಶದ ಮೊದಲ ಜಲವಿದ್ಯುತ್ ಉತ್ಪಾದನೆಯಾಯಿತು. ಹಾಗಾಗಿ ನಾವೇ ಇದಕ್ಕೂ ಮುಂದಡಿ ಇಡುತ್ತಿದ್ದೇವೆ. ದೂರದೃಷ್ಟಿ ಇರಿಸಿಕೊಂಡು ಈ ಪ್ರಯೋಗ ಮಾಡುತ್ತಿದ್ದೇವೆ. ಹೊಸ ಸಬ್ ಸ್ಟೇಷನ್ ಮಾಡಲು ಜಾಗ ಇಲ್ಲ. ಇರುವ ಸಬ್ ಸ್ಟೇಷನ್ ಅಪ್ ಗ್ರೇಡ್ ಮಾಡಬೇಕು. ಹಾಗಾಗಿ ಪಿಪಿಪಿ ಮಾದರಿಯಲ್ಲಿ ಅಂಡರ್ ಗ್ರೌಂಡ್ ಮಾಡುವ ಚಿಂತನೆ ಮಾಡಿದ್ದೇವೆ ಎಂದರು.
ಬೇಡಿಕೆಯಂತೆ ವಿದ್ಯುತ್ ಪೂರೈಕೆ ಮಾಡಲು ಅಣು ವಿದ್ಯುತ್ ಸ್ಥಾವರ ವಿಸ್ತರಣೆ, ಸ್ಥಾಪನೆಯಂತಹ ಚಿಂತನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಾರ್ಜ್, ಕೈಗಾ ಅಣು ವಿದ್ಯುತ್ ಸ್ಥಾವರ ವಿಸ್ತರಣೆ ಕುರಿತು ಕೇಂದ್ರ ಚಿಂತನೆ ನಡೆಸಿದೆ. ಆದರೆ ನಾವು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆಧ್ಯತೆ ನೀಡುತ್ತಿದ್ದೇವೆ. ಬೆಂಗಳೂರು ಸುಂದರ ನಗರ. ಹಾಗಾಗಿ ಎಲ್ಲ ಬದಲಾವಣೆ ಮಾಡಲ್ಲ. 171 ರಲ್ಲಿ 15 ಸಬ್ಸ್ಟೇಷನ್ ಕೈಗೆತ್ತಿಕೊಳ್ಳಲಿದ್ದೇವೆ. ನಂತರ ಪ್ರತಿಕ್ರಿಯೆ ನೋಡಿಕೊಂಡು ಉಳಿದ ಬಗ್ಗೆ ನಿರ್ಧಾರ ಮಾಡುತ್ತೇವೆ. ಡೆವಲಪರ್ಗೂ ಇದರಲ್ಲಿ ಲಾಭವಿರಲಿದೆ. ಜಾಗವನ್ನು 35 ವರ್ಷಕ್ಕೆ ಗುತ್ತಿಗೆ ಕೊಡಲಾಗುತ್ತದೆ. ನಂತರ ಸಾರ್ವಜನಿಕ ಟೆಂಡರ್ ಕರೆಯಲಾಗುತ್ತದೆ. ಹೂಡಿಕೆದಾರರಿಗೆ ಲಾಭದಾಯಕವಾಗಲು ಏನು ಮಾಡಬಹುದು ಎನ್ನುವ ಕುರಿತು ನಿರ್ಧರಿಸಿ ಅವಕಾಶ ನೀಡಲಾಗುತ್ತದೆ. ಕಾನ್ಸೆಪ್ಟ್ ಓಕೆ ಆದ ನಂತರ ಡಿಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್ ಮಾಡಲಾಗುತ್ತದೆ. ಅದರಲ್ಲಿ ಎಲ್ಲವನ್ನೂ ವಿಸ್ತೃತವಾದ ರೀತಿಯಲ್ಲಿ ತಿಳಿಸಲಾಗುತ್ತದೆ ಎಂದರು.
ಸರ್ಕಾರಿ-ಖಾಸಗಿ ಸಹಭಾಗಿತ್ವ ಯೋಜನೆಯ ಪ್ರಮುಖ ಪ್ರಯೋಜನಗಳು:
- ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಖಾಸಗಿ ಡೆವಲಪರ್ಗಳ ಆಯ್ಕೆ
- ಡೆವಲಪರ್ಗಳಿಂದ GIS ಸಬ್ ಸ್ಟೇಷನ್‌ಗೆ ಬಂಡವಾಳ ಹೂಡಿಕೆ
- KPTCL ನಿಂದ ಉಪಕೇಂದ್ರದ ನಿರ್ಮಾಣ ಮತ್ತು ನಿರ್ವಹಣೆ
- ಸಬ್ ಸ್ಟೇಷನ್ ಆವರಣದೊಳಗಿನ ಗುತ್ತಿಗೆ ಬಾಡಿಗೆ ಮೂಲಕ ಭೂಮಿಯಲ್ಲಿ ಡೆವಲಪರ್ ತಮ್ಮ ಹೂಡಿಕೆ ಮರುಪಡೆಯಲು ಉತ್ತಮ ಅವಕಾಶ
- ಡೆವಲಪರ್ಗಳಿಂದ ಬಂಡವಾಳ, ನಿರ್ಮಾಣ ಮತ್ತು ನಿರ್ವಹಣೆ
- ಡೆವಲಪರ್ಗಳಿಗೆ ಕೆಪಿಟಿಸಿಎಲ್‌ನಿಂದ ಭೂಮಿ ಗುತ್ತಿಗೆ
- ಗುತ್ತಿಗೆ ಅವಧಿ ನಂತರ KPTCLಗೆ ಭೂಮಿ ಮತ್ತು ರಿಯಲ್ ಎಸ್ಟೇಟ್ ವರ್ಗಾವಣೆ
ಕೃಷಿಯಲ್ಲಿ ಸೌರ ವಿದ್ಯುತ್ ಬಳಕೆ ಕುರಿತ ಜಾಗೃತಿ : ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾರ್ಚ್ 9 ರಂದು ಜಿಕೆವಿಕೆ ಆವರಣದಲ್ಲಿ 'ರೈತ ಸೌರಶಕ್ತಿ ಮೇಳ' ಆಯೋಜಿಸಿದ್ದು, ರಾಜ್ಯದ ರೈತ ಸಮೂಹದಲ್ಲಿ ಕೃಷಿಯಲ್ಲಿ ಸೌರ ವಿದ್ಯುತ್ ಬಳಕೆ ಕುರಿತ ಜಾಗೃತಿ ಮೂಡಿಸಲಾಗುತ್ತದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕರ್ಟನ್‌ರೈಸರ್ ಸಮಾರಂಭದಲ್ಲಿ ಮಾತನಾಡಿದ ಅವರು, "ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್‌ಸೆಟ್ ಬಳಕೆಯೇ ಪರಿಹಾರ. ಹಾಗಾಗಿ, ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಜಿಕೆವಿಕೆ ಆವರಣದಲ್ಲಿ ಮಾರ್ಚ್ 9 ರಂದು "ರೈತ ಸೌರ ಶಕ್ತಿ ಮೇಳ” ಆಯೋಜಿಸಲಾಗಿದೆ" ಎಂದರು.
"ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು. ಅದಕ್ಕಾಗಿ ನಮ್ಮ ಸರ್ಕಾರ 'ಕುಸುಮ್ ಬಿ' ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ. ನವೀನ ಮಾದರಿಯ ಸೌರ ಪಂಪ್‌ಸೆಟ್‌ಗಳ ಪ್ರಾತ್ಯಕ್ಷಿಕೆಯನ್ನು ನೋಡಿ, ಈ ವಿಚಾರವಾಗಿ ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮೇಳ ಅತ್ಯುತ್ತಮ ವೇದಿಕೆಯಾಗಲಿದೆ. ಸೌರ ಪಂಪ್‌ಸೆಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಅಳವಡಿಸಿಕೊಳ್ಳುವಂತಾಗಬೇಕು"ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 9ರ ಸಂಜೆ 4 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜತೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 'ಕುಸುಮ್ ಸಿ' ಯೋಜನೆ ಹಾಗೂ ರಾಜ್ಯದ 13 ಜಿಲ್ಲೆಗಳಲ್ಲಿರುವ ವಿವಿಧ ವೋಲ್ಟೇಜ್ ವರ್ಗಗಳ ಹೊಸ ಸಬ್‌ಸ್ಟೇಷನ್‌ಗಳಿಗೂ ಮುಖ್ಯಮಂತ್ರಿಯವರು ಚಾಲನೆ ನೀಡಲಿದ್ದಾರೆ. ಮೇಳದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಸೇರಿದಂತೆ ಹಲವು ಸಚಿವರು ಮೇಳದಲ್ಲಿ ಭಾಗಿಯಾಗಲಿದ್ದಾರೆ" ಎಂದು ಸಚಿವ ಜಾರ್ಜ್ ಅವರು ಮಾಹಿತಿ ನೀಡಿದರು.
"ಹೆಚ್ಚಿನ ಪ್ರಮಾಣದಲ್ಲಿ ಸೌರ ಪಂಪ್‌ಸೆಟ್ ಅಳವಡಿಕೆಯನ್ನು ರೈತರ ಸಮೂಹಗಳಲ್ಲಿ ಉತ್ತೇಜಿಸಲು ರಾಜ್ಯ ಸರ್ಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ. 30 ರಷ್ಟು ಸಹಾಯಧನವನ್ನು ಶೇ. 50 ಕ್ಕೆ ಹೆಚ್ಚಿಸಿದೆ. ಒಟ್ಟಾರೆ ಮೊತ್ತದಲ್ಲಿ ಶೇ. 20 ರಷ್ಟನ್ನು ಮಾತ್ರ ರೈತರು ಭರಿಸಬೇಕಾಗಿರುತ್ತದೆ. ಇದಲ್ಲದೇ, ಯೋಜನೆಯಡಿ ರೈತರಿಗೆ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸಲಿದೆ"ಎಂದರು.
ಇದನ್ನೂ ಓದಿ :ಕರ್ನಾಟಕದಲ್ಲಿ ಗ್ರೀನ್ ಹೈಡ್ರೋಜನ್ ವಿದ್ಯುತ್ ಉತ್ಪಾದನೆಗೆ ಹೊಸ ನೀತಿ ಜಾರಿ: ಇಂಧನ ಸಚಿವ ಕೆ.ಜೆ.ಜಾರ್ಜ್