ಬೆಂಗಳೂರು/ಚಿಕ್ಕಮಗಳೂರು : ನಕ್ಸಲ್ ನಾಯಕ ವಿಕ್ರಂಗೌಡ ಎನ್ಕೌಂಟರ್ ಬಳಿಕ ಸಂವಿಧಾನದ ವಿರುದ್ಧ ಹಾದಿಯಲ್ಲಿ ತೆರೆಮರೆಯಲ್ಲಿ ಹೋರಾಟ ನಡೆಸುತ್ತಿದ್ದವರು ಮುಖ್ಯವಾಹಿನಿಗೆ ಬಂದರೆ ಸರ್ಕಾರ ಸಹಾನುಭೂತಿಯಿಂದ ನಡೆದುಕೊಳ್ಳಲಿದೆ ಎಂಬ ರಾಜ್ಯ ಸರ್ಕಾರದ ಭರವಸೆಯನ್ನ ನಂಬಿ ಆರು ಮಂದಿ ನಕ್ಸಲೀಯರು ಇಂದು ಸಮಾಜದ ಮುಖ್ಯವಾಹಿನಿಗೆ ಪ್ರವೇಶಿಸಿದರು.
ಸರ್ಕಾರದ ಭರವಸೆ ಜೊತೆಗೆ ಶಾಂತಿಗಾಗಿ ನಾವು ಸಂಘಟನೆ ಹಾಗೂ ಶರಣಾಗತಿ ನೀತಿ ಸಮಿತಿ ಸದಸ್ಯರು ಮನವೊಲಿಸಿ ನಕ್ಸಲೀಯರಾದ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ಕೆ. ವಸಂತ, ಜಿಶಾ ಹಾಗೂ ಮಾರೆಪ್ಪ ಅರೋಲಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಣಾದರು. ಈ ವೇಳೆ ಹೂಗುಚ್ಛ ಹಾಗೂ ಸಂವಿಧಾನ ಪುಸ್ತಕ ನೀಡಿ ಸ್ವಾಗತಿಸಲಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ 'ಅನ್ಯಾಯದ ವಿರುದ್ಧ, ಶೋಷಣೆ, ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವುದು ತಪ್ಪಲ್ಲ. ವ್ಯವಸ್ಥೆ ಬದಲಾವಣೆಗೆ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಹೋರಾಟ ಶಾಂತಿಯುತವಾಗಿ, ನ್ಯಾಯಯುತವಾಗಿ ಮಾಡಬೇಕು. ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಈ ಹಿಂದೆಯೂ ಹಲವು ನಕ್ಸಲೀಯರು ಶಸ್ತ್ರಾಸ್ತ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಇವರ ಪುನರ್ವಸತಿಗೆ ಸರ್ಕಾರ ನೆರವು ಒದಗಿಸಿದೆ' ಎಂದರು.
ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಪ್ರವೇಶಿಸಿದ ನಕ್ಸಲರು (ETV Bharat) 'ಶಾಂತಿಗಾಗಿ ನಾಗರಿಕ ವೇದಿಕೆಯು ನನ್ನನ್ನು ಭೇಟಿ ಮಾಡಿ ನಕ್ಸಲಿಯರ ಮನವೊಲಿಸುವ ಬಗ್ಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ನಕ್ಸಲಿಸಂ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಹೇಳಿದ್ದೆ. ಕರ್ನಾಟಕದಲ್ಲಿ ನಕ್ಸಲಿಸಂ ಕೊನೆಗಾಣಿಸಲು ಅವರ ಬೇಡಿಕೆಗೆ ಸ್ಪಂದಿಸಲು ಏನೆಲ್ಲಾ ಕಾರ್ಯಕ್ರಮ ಅಗತ್ಯವೊ ಅದನ್ನು ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ' ಎಂದು ಸಿಎಂ ಅಭಯ ನೀಡಿದರು.
ಶಸ್ತ್ರಾಸ್ತ್ರ ಮೂಲಕ ಹೋರಾಟ ಮಾಡಿ ನ್ಯಾಯ ಪಡೆಯಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಶಾಂತಿಯುತವಾಗಿ ಹೋರಾಟ ನಡೆಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಸರ್ಕಾರ ಇದನ್ನು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನಿರಲ್ಲ. ನಕ್ಸಲಿಸಂ ಮುಕ್ತವಾದ ಸಮಾಜ ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ಬರುವ ನಕ್ಸಲಿಯರಿಗೆ ಎಲ್ಲಾ ರೀತಿಯ ನೆರವು ಬಹಿರಂಗವಾಗಿ ಹೇಳಿದ್ದೆ. ನಿಮ್ಮನ್ನು ಕ್ರಿಮಿನಲ್‌ಗಳ ರೀತಿ ನೋಡದೆ, ಮಾನವರಂತೆ ನೋಡುವ ಭರವಸೆ ನೀಡಿದಂತೆ ಸರ್ಕಾರ ನಡೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಚಿಕ್ಕಮಗಳೂರು ಡಿಸಿ ಕಚೇರಿಯಲ್ಲಿ ಸಿದ್ಧವಾಗಿದ್ದ ವೇದಿಕೆ : ಇಂದು ಜಿಲ್ಲಾ ಆಡಳಿತದ ಮುಂದೆ ನಿಗದಿಯಾಗಿದ್ದ 6 ಜನ ನಕ್ಸಲರ ಶರಣಾಗತಿ ಪ್ರಕ್ರಿಯೆ ಅಂತಿಮ ಕ್ಷಣದಲ್ಲಿ ಸ್ಥಳ ಬದಲಾಯಿತು. ಬೆಳಗ್ಗೆ 10 ರಿಂದ 12 ಗಂಟೆಯೊಳಗೆ ಈ ಆರು ಜನರು ಜಿಲ್ಲಾಡಳಿತದ ಮುಂದೆ ಶರಣಾಗುವ ಬಗ್ಗೆ ಸಮಯ ನಿಗದಿ ಆಗಿತ್ತು. ಸರ್ಕಾರಿ ನೇತೃತ್ವದ ಶರಣಾಗತಿ ಸಮಿತಿ ಸದಸ್ಯರಾದ ಶ್ರೀಪಾಲ್, ಬಂಜಗೆರೆ ಜಯಪ್ರಕಾಶ್, ಪಾರ್ವತೀಶ್ ಜಯಪುರ ಸಮೀಪ ವಾಸ್ತವ್ಯ ಹೂಡಿದ್ದು, ಬೆಳಗ್ಗೆ 8 ರ ಬಳಿಕ ನಕ್ಸಲರೊಂದಿಗೆ ಚಿಕ್ಕಮಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರು.
ಮುಂಡಗಾರು ಲತಾ ಪ್ರತಿಕ್ರಿಯೆ (ETV Bharat) ಇವರಿಗೆ ಜನದನಿ ಸಂಘಟನೆಯ ನೂರ್ ಶ್ರೀಧರ್, ಶ್ರೀಧರ್, ಹಾಗಲ ಗಂಜಿ ವೆಂಕಟೇಶ್, ಕೌಳಿ ರಾಮು, ವಳಲೆ ಸರೋಜಾ, ಹಾಗಲ ಗಂಜಿ ಭಾಗ್ಯ ಸಾಥ್ ನೀಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿವಿಕ್ರಮ ಅಮಟೆ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸೇರಿದಂತೆ ಪೊಲೀಸರ ಭಾರಿ ಬಿಗಿ ಬಂದೋಬಸ್ತ್ನಲ್ಲಿ ಶರಣಾಗತಿ ಆಗಲಿದ್ದ ನಕ್ಸಲರು ಜಿಲ್ಲಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದರು. ಕಡಬಗೆರೆ ಬಳಿ ಬರುತ್ತಿದ್ದಂತೆ ಮುಖ್ಯ ಮಂತ್ರಿಗಳ ಕಚೇರಿಯಿಂದ ಬಂದ ದೂರವಾಣಿ ಕರೆ ಪೊಲೀಸ್ ಅಧಿಕಾರಿಗಳನ್ನು ಕ್ಷಣ ಕಾಲ ಇಕ್ಕಟ್ಟಿಗೆ ಸಿಲುಕಿಸಿತು. ಶರಣಾಗತಿ ಪ್ರಕ್ರಿಯೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯಬೇಕು, ಎಲ್ಲರನ್ನೂ ಅಲ್ಲಿಗೆ ಕರೆತನ್ನಿ ಎನ್ನುವ ಸಂದೇಶ ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದವರಿಗೆ ಬ್ರೇಕ್ ಹಾಕಿತು.
ಸರಿ ಸುಮಾರು ಅರ್ಧ ಗಂಟೆಗಳ ಕಾಲ ದಾರಿಯಲ್ಲೇ ನಿಂತು ಚರ್ಚಿಸಿ ಪ್ರಯಾಣ ಮುಂದುವರಿಸಿದ್ದು ಆಲ್ದೂರು ಸಮೀಪ ಬರುತ್ತಿದ್ದಂತೆ ಶರಣಾಗತಿ ಬೆಂಗಳೂರಿನಲ್ಲಿ ಎನ್ನುವುದು ಸ್ಪಷ್ಟವಾಗಿತ್ತು. ಇತ್ತ ಚಿಕ್ಕಮಗಳೂರು ಪ್ರವಾಸಿ ಕೇಂದ್ರದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ, ಜನದನಿ ಸಂಘಟನೆ ಮುಖಂಡರು, ಕಾರ್ಯಕರ್ತರು, ಶರಣಾಗಲಿದ್ದ ನಕ್ಸಲಿಗರ ಬಂಧುಗಳು ಸಮಾವೇಶಗೊಂಡಿದ್ದು ಬರುವಿಕೆಗೆ ಕಾದು ನಿಂತಿದ್ದರು. ಪೊಲೀಸರು ಪ್ರವೇಶ ದ್ವಾರಗಳನ್ನು ಮುಚ್ಚಿ ನಿರ್ದಿಷ್ಟಪಡಿಸಿದ ಜನರಿಗಷ್ಟೇ ಒಳಬಿಡುತ್ತಿದ್ದುದು ಕೂಡ ಅಸಮಾಧಾನಕ್ಕೆ ಕಾರಣವಾಗಿತ್ತು.
ನಕ್ಸಲ್ ಮುಕ್ತ ಮಲೆನಾಡು ಆಗುವ ಐತಿಹಾಸಿಕ ಕ್ಷಣಗಳು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯುವುದು ಸೂಕ್ತ ಎನ್ನುವ ಸಲಹೆ ಹಿನ್ನೆಲೆಯಲ್ಲಿ ಅಂತಿಮ ಕ್ಷಣದ ಬದಲಾವಣೆ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ಬಂದೋಬಸ್ತ್ ಮೂಲಕ ಈ ಆರು ಜನರನ್ನು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಆರು ಜನ ನಕ್ಸಲರನ್ನು ಕರೆದೊಯ್ಯಲಾಯಿತು.
ಇದನ್ನೂ ಓದಿ: 'ಹುಟ್ಟೂರಿನಲ್ಲಿ ನಾನು ಓದಿದ ಕಿರಿಯ ಪ್ರಾಥಮಿಕ ಶಾಲೆಗೆ ಪುನರ್ವಸತಿ ಪ್ಯಾಕೇಜ್ನ ಅರ್ಧ ಹಣ ನೀಡಲಿ': ಮುಖ್ಯವಾಹಿನಿಗೆ ಬರಲು ಸಿದ್ಧರಾದ ನಕ್ಸಲರು