ಕರ್ನಾಟಕ

karnataka

ETV Bharat / state

ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ 663 ಕೋಟಿ ವೆಚ್ಚ: ಕೆ‌.ಹೆಚ್​ ಮುನಿಯಪ್ಪ ಮಾಹಿತಿ - KH Muniappa

ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 17.57 ಲಕ್ಷ ಫಲಾನುಭವಿಗಳು ಪಂಚ ಗ್ಯಾರಂಟಿಗಳ ಲಾಭ ಪಡೆದಿದ್ದು, 663.36 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಸಚಿವ ಕೆ‌.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.

bng
ಗ್ಯಾರಂಟಿ ಯೋಜನೆಗಳ ಅನುಷ್ಠಾನದದ ಮಾಹಿತಿ ನೀಡುವ ಸಮಾವೇಷದಲ್ಲಿ ಸಚಿವರು

By ETV Bharat Karnataka Team

Published : Feb 6, 2024, 9:41 AM IST

Updated : Feb 6, 2024, 12:47 PM IST

ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮಾಹಿತಿ ನೀಡುವ ಸಮಾವೇಶ

ದೇವನಹಳ್ಳಿ(ಬೆಂ.ಗ್ರಾಮಾಂತರ):ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಿ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದ್ದಾರೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್​ ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಆಡಳಿತ ಸಹಯೋಗದಲ್ಲಿ ದೇವನಹಳ್ಳಿ ತಾಲೂಕಿನ ವಿಜಯಪುರ ಟೌನ್​ನಲ್ಲಿ ಹಾಗೂ ಬೂದಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಜನರಿಗೆ ಮಾಹಿತಿ ನೀಡುವ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರವು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ, ಸದೃಢರನ್ನಾಗಿ ಮಾಡಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಐದು ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದವರ ಜೀವನ ಸುಧಾರಣೆ ಆಗಿದೆ, ಆರ್ಥಿಕವಾಗಿ ಸಬಲರಾಗಿದ್ದಾರೆ, ಆಗುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಉಚಿತ ಬೆಳಕು ಸುಸ್ಥಿರ ಬದುಕು ಗೃಹಜ್ಯೋತಿಯ ಉದ್ದೇಶವಾಗಿದ್ದು, ಜಿಲ್ಲೆಯಲ್ಲಿ 3,54,304 ಗ್ರಾಹಕರ ನೋಂದಾಯಿಸಿಕೊಂಡಿದ್ದು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹಸಿವು ಮುಕ್ತ ಕರ್ನಾಟಕ ಮಾಡುವ ಹಿತದೃಷ್ಟಿಯಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,99,979 ಅರ್ಹ ಫಲಾನುಭವಿಗಳಿಗೆ 11,67,01,940 ರೂ.ಗಳ ಹಣವನ್ನು ಡಿ.ಬಿ.ಟಿ ಮೂಲಕ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ.

ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯಿಂದ ದೇವನಹಳ್ಳಿ ತಾಲೂಕಿನಲ್ಲಿ ಬಿ.ಎಂ.ಟಿ.ಸಿ ಯಲ್ಲಿ ಯೋಜನೆ ಪ್ರಾರಂಭದಿಂದ ಇಲ್ಲಿಯ ತನಕ ಸುಮಾರು 6,91,292 ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆಯ ಲಾಭವನ್ನು ಪಡೆದುಕೊಂಡು ಇರುತ್ತಾರೆ. ಗೃಹಲಕ್ಷ್ಮಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಲ್ಲಿಯವರೆಗೆ 2,01,781 ಫಲಾನುಭವಿಗಳು ನೋಂದಣಿಯಾಗಿದ್ದು, ಫಲಾನುಭವಿಗಳ ಕುಟುಂಬಕ್ಕೆ ಮಾಸಿಕವಾಗಿ 2000ರೂ.ಗಳು ನೇರವಾಗಿ ಬ್ಯಾಂಕ್​ ಖಾತೆಗಳಿಗೆ ವರ್ಗಾಯಿಸಲಾಗಿರುತ್ತದೆ.

ಯುವನಿಧಿ ಯೋಜನೆಯು ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಪದವಿ ಮುಗಿಸಿ 180 ದಿನಗಳು ಆದರೂ ನಿರುದ್ಯೋಗಿಗಳಾಗಿರುವ ಪದವೀಧರರಿಗೆ ಮಾಸಿಕರು 3000 ಮತ್ತು ಡಿಪ್ಲೋಮಾ ಪದವೀಧರರಿಗೆ ಮಾಸಿಕ ರೂ. 1500ಗಳನ್ನು 24 ತಿಂಗಳ ಅವರಿಗೆ ನೀಡುವ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,591 ನಿರುದ್ಯೋಗಿಗಳು ನೋಂದಣಿಯಾಗಿದ್ದು, ಇವರ ಬ್ಯಾಂಕ್​ ಖಾತೆಗಳಿಗೆ ಅನುದಾನ ವರ್ಗಾಯಿಸಲು ಕ್ರಮ ವಹಿಸಲಾಗುತ್ತಿದೆ.

ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳಡಿ ಜಿಲ್ಲೆಯಲ್ಲಿ 17.57 ಲಕ್ಷ ಫಲಾನುಭವಿಗಳು ಇದರ ಲಾಭ ಪಡೆದಿದ್ದು, 663.36 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಸಚಿವರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಹಾಗೂ ಜನರಿಗೆ ಸೌಲಭ್ಯದ ಮಾಹಿತಿ ನೀಡಲು ಪ್ರತಿ ಹೋಬಳಿ, ತಾಲೂಕು ಮಟ್ಟದಲ್ಲಿ ಸಮಾವೇಶ ಮಾಡಲಾಗುವುದು. ಅಧಿಕಾರಿಗಳು ಪಂಚ ಗ್ಯಾರಂಟಿ ಯೋಜನೆಗಳನ್ನು ಕಡ್ಡಾಯವಾಗಿ ಜನತೆಗೆ ತಲುಪಿಸಬೇಕು. ಪಂಚ ಯೋಜನೆಗಳಿಂದ ಜನ ವಂಚಿತರಾದರೆ ಸಂಬಂಧಿಸಿದ ಇಲಾಖೆ ಅಧಿಕಾರಿಯೇ ಹೊಣೆ. ಯೋಜನೆ ತಲುಪದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೆ ಗ್ಯಾರಂಟಿ ಯೋಜನೆ ತಲುಪಿಸಲು ಸೂಕ್ತ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಮಾವೇಶದಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಪ್ರವೀಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ, ಸಚಿವರ ಆಪ್ತ ಕಾರ್ಯದರ್ಶಿ ಡಾ. ಹೆಚ್ ನಟರಾಜ್, ದೇವನಹಳ್ಳಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಾಥ್​ ಗೌಡ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ಫಲಾನುಭವಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಇದನ್ನೂ ಓದಿ:ದೆಹಲಿಯಲ್ಲಿ ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ಹೋರಾಟಕ್ಕೆ ಸಿದ್ಧತೆ: ಸ್ಥಳ ಪರಿಶೀಲಿಸಿದ ಡಿಕೆಶಿ

Last Updated : Feb 6, 2024, 12:47 PM IST

ABOUT THE AUTHOR

...view details