ಬೆಂಗಳೂರು:ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿರುವ ಕೆಎಸ್ಆರ್ಟಿಸಿ ಪ್ರಶಸ್ತಿಗಳ ಬೇಟೆ ಮುಂದುವರೆಸಿದೆ. ಇದೀಗ ಐದು ಜಾಗತಿಕ ಪ್ರಶಸ್ತಿಗಳೊಂದಿಗೆ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್.ಲತಾ ಅವರಿಗೆ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿದ್ದು, ಈ ಮೂಲಕ ರಾಜ್ಯ ಸಾರಿಗೆ ಸಂಸ್ಥೆಗೆ ಎಂಟು ತಿಂಗಳಲ್ಲೇ ಪ್ರಶಸ್ತಿಗಳ ಅರ್ಧ ಶತಕವನ್ನು ದಾಟಿದೆ.
ಹೊಸ ಉಪಕ್ರಮಗಳು, ನೂತನ ಮಾದರಿಯ ಬಸ್ಗಳನ್ನು ರಸ್ತೆಗಿಳಿಸಿ ಪ್ರಯೋಗದ ಮೂಲಕವೇ ಉತ್ತಮ ಸಾರಿಗೆ ಸೇವೆಗೆ ಬೇಕಾದ ಮಾದರಿಯ ಬಸ್ಗಳ ಸಂಚಾರದ ಮೂಲಕ ದೇಶದ ಗಮನ ಸೆಳೆದಿರುವ ಕೆಎಸ್ಆರ್ಟಿಸಿಗೆ ಇದೀಗ ಮತ್ತೆ 6 ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವರ್ಲ್ಡ್ ಮ್ಯಾನ್ಯುಫ್ಯಾಕ್ಚರಿಂಗದ ಕಾಂಗ್ರೆಸ್ (World Manufacturing Congress) ಹಾಗೂ ವರ್ಲ್ಡ್ ಮಾರ್ಕೆಟಿಂಗ್ ಕಾಂಗ್ರೆಸ್ ( World Marketing Congress)ನ 5 ಪ್ರಶಸ್ತಿಗಳು ಹಾಗೂ ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗೆ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿದೆ.
ಮುಂಬೈನ ಹೋಟೆಲ್ ತಾಜ್ ಲ್ಯಾಂಡ್ಸ್ ಎಂಡ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುನೈಟೆಡ್ ಸ್ಟೇಟ್ಸ್ ನಿನಾ ಇ ಉಡರ್ಡ್ ಅಸೋಸಿಯೇಟ್ಸ್ ಅಧ್ಯಕ್ಷರು ಹಾಗೂ ಮುಖ್ಯಸ್ಥರಾದ ಮಿಸ್.ನಿನಾ ಇ ಉಡರ್ಡ್ ಹಾಗೂ ದುಬೈನ ಓಝೋನ್ ಗ್ರೂಪ್ ಸಂಸ್ಥಾಪಕ ಡಾ.ಓವಿಲಿಯಾ ಫೆರ್ನಾಂಡಿಸ್ ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೆಎಸ್ಆರ್ಟಿಸಿ ನಿಗಮ ಮಂಡಳಿಯ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್, ವಿಭಾಗೀಯ ತಾಂತ್ರಿಕ ಅಭಿಯಂತರ ಹೆಚ್ ಎಸ್. ಸತೀಶ್, ವಿಭಾಗೀಯ ತಾಂತ್ರಿಕ ಶಿಲ್ಪಿ ಸೌಮ್ಯ ಸಿ ಹಾಗೂ ಸಹಾಯಕ ಆಡಳಿತಾಧಿಕಾರಿ ಶಿಬಾ.ಎಸ್. ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿಗಳು ವಿವರ:
- ವಿದ್ಯುತ್ ವಾಹನಗಳ ಕೈಗಾರಿಕಾ ನಾಯಕತ್ವ ಪ್ರಶಸ್ತಿ - ಇ.ವಿ.ಪವರ್ ಪ್ಲಸ್
- ಜಾಗತಿಕ ಬ್ರಾಂಡ್ ಉತ್ಕೃಷ್ಟತೆ ಪ್ರಶಸ್ತಿ - ಅತ್ಯುತ್ತಮ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಉಪಕ್ರಮ
- ವರ್ಷದ ವ್ಯವಹಾರಿಕ ನಾಯಕತ್ವ ಪ್ರಶಸ್ತಿ - ಅತ್ಯುತ್ತಮ ವಿನೂತನ ಉಪಕ್ರಮ ಸಂಸ್ಥೆ
- ಜಾಗತಿಕ ಮಾನವ ಸಂಪನ್ಮೂಲ ಉತ್ಕೃಷ್ಟತೆ ಪ್ರಶಸ್ತಿ - ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಂಸ್ಥೆ
- ಜಾಗತಿಕ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ - ಜಾಗತಿಕ ಮಾನವ ಸಂಪನ್ಮೂಲ ಉಪಕ್ರಮ
- ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್ ಅವರಿಗೆ ವಿಶ್ವ ಮಾರ್ಕೆಟಿಂಗ್ ಉತ್ಕೃಷ್ಟತೆಗಾಗಿ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ