ಬೆಂಗಳೂರು:2024ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ, ಪ್ರಾಚೀನ ಹಾಗೂ ಐತಿಹಾಸಿಕ ಸ್ಮಾರಕ ದತ್ತು ತೆಗೆದುಕೊಳ್ಳಲು ಅವಕಾಶ ನೀಡುವ 2024ನೇ ಸಾಲಿನ ಕರ್ನಾಟಕ ಪ್ರಾಚೀನ, ಐತಿಹಾಸಿಕ ಸ್ಮಾರಕಗಳು, ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ (ತಿದ್ದುಪಡಿ) ವಿಧೇಯಕ ಸೇರಿದಂತೆ 6 ವಿಧೇಯಕಗಳು ವಿಧಾನಸಭೆಯಲ್ಲಿ ಇಂದು ಅಂಗೀಕಾರಗೊಂಡವು.
ಮುಡಾ ಹಗರಣದ ಬಗ್ಗೆ ಸದನದಲ್ಲಿ ಬಿಜೆಪಿ-ಜೆಡಿಎಸ್ ಶಾಸಕರ ಗದ್ದಲದ ನಡುವೆ ನಡೆದ ಶಾಸನ ರಚನಾ ಕಲಾಪದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ವಿಧೇಯಕ ಕುರಿತು ಮಾತನಾಡಿ, ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳ ಸಂರಕ್ಷಣೆ ಮಾಡುವ ಕರ್ತವ್ಯವಿದೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ. ಸೊಸೈಟಿ, ಸಹಕಾರ ಸಂಘಗಳು, ಟ್ರಸ್ಟ್ಗಳು, ಸರ್ಕಾರೇತರ ಸಂಸ್ಥೆಗಳು ಆಸಕ್ತಿ ಉಳ್ಳ ವ್ಯಕ್ತಿಗಳನ್ನು ಸ್ಮಾರಕ ಪಟ್ಟಿಯಲ್ಲಿ ಸೇರಿಸುವುದಕ್ಕೆ ಅರ್ಹರಾಗಿಸುವುದಕ್ಕೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.
ನಂತರ ಸ್ಪೀಕರ್ 2024ನೇ ಸಾಲಿನ ಕರ್ನಾಟಕ ಪ್ರಾಚೀನ, ಐತಿಹಾಸಿಕ ಸ್ಮಾರಕಗಳು, ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ (ತಿದ್ದುಪಡಿ) ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಒಪ್ಪಿಗೆ ದೊರೆಯಿತು.
ಸಮಾಜಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಪರವಾಗಿ ಕಾನೂನು ಸಚಿವರು ಪರ್ಯಾಲೋಚಿಸಿದ 2024ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕಕ್ಕೂ ಸದನ ಒಪ್ಪಿಗೆ ನೀಡಿತು.
ವಿಧೇಯಕ ಕುರಿತು ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ಹೊರಗುತ್ತಿಗೆಯಲ್ಲಿ ಸಾಮಾಜಿಕ ನ್ಯಾಯವಿರಲಿಲ್ಲ. ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ತಿದ್ದುಪಡಿ ತರಲಾಗಿದ್ದು, ಸದನ ಒಪ್ಪಿಗೆ ನೀಡಬೇಕೆಂದು ಇದಕ್ಕೂ ಮುನ್ನ ಕೋರಿದ್ದರು.