ಕರ್ನಾಟಕ

karnataka

ETV Bharat / state

ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ : ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತ - BUS SERVICE SUSPENDED

ಕೂಡಲೇ ಎರಡೂ ಸರ್ಕಾರಗಳು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Karnataka Transport Bus and black ink on the bus
ಕರ್ನಾಟಕ ಸಾರಿಗೆ ಬಸ್​ ಹಾಗೂ ಬಸ್​ ಮೇಲೆ ಕರಿ ಮಸಿ ಬಳಿದಿರುವುದು (ETV Bharat)

By ETV Bharat Karnataka Team

Published : Feb 23, 2025, 2:53 PM IST

ಬೆಳಗಾವಿ : ಕೆಎಸ್ಆರ್​ಟಿಸಿ ಬಸ್ ಕಂಡಕ್ಟರ್ ಕನ್ನಡ ಮಾತಾಡಿದ್ದಕ್ಕೆ ಬೆಳಗಾವಿ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಬಳಿ ಕಿಡಿಗೇಡಿಗಳ ಗುಂಪು ಹಲ್ಲೆ ಮಾಡಿದ ಘಟನೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಅಲ್ಲದೇ ಎರಡೂ ರಾಜ್ಯಗಳ ಬಸ್ ಸಂಚಾರ ಕೂಡ ಸ್ಥಗಿತವಾಗಿದೆ.

ಹೌದು, ಕೊಲ್ಹಾಪುರ ಸೇರಿ ಕೆಲವು ಕಡೆ ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ಕರ್ನಾಟಕ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಬಸ್ ಮೇಲೆ ಭಗವಾ ಧ್ವಜ ಕಟ್ಟಿ, ಬಸ್​ ಮೇಲೆ ಕಪ್ಪು ಮಸಿಯಿಂದ ಬರೆದು ಶಿವಸೇನೆ ಮತ್ತು ಎಂಎನ್​ಎಸ್​ ಕಿಡಿಗೇಡಿಗಳು ಉದ್ಧಟತನ ಪ್ರದರ್ಶಿಸಿದ್ದಾರೆ. ಹಾಗಾಗಿ, ಕರ್ನಾಟಕದಿಂದ ಹೊರಡುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ನಿಪ್ಪಾಣಿ, ಚಿಕ್ಕೋಡಿ, ಬೆಳಗಾವಿ ಮಾರ್ಗವಾಗಿ ಕೊಲ್ಹಾಪುರಕ್ಕೆ ತೆರಳುವ ಎಲ್ಲಾ ಕೆಎಸ್ಆರ್ ಟಿಸಿ ಬಸ್​ಗಳ ಸಂಚಾರ ಬಂದ್ ಮಾಡಲಾಗಿದೆ. ಪ್ರತಿದಿನ 120 ಬಸ್​ಗಳು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದವು. ಮುಂದಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಂಚರಿಸುವ ಎಲ್ಲಾ ಬಸ್​ಗಳನ್ನು ಕೂಡ ಬಂದ್ ಮಾಡಲಾಗಿದೆ. ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ಮಹಾರಾಷ್ಟ್ರ ಬಸ್ ಮೇಲೆ ಶುಕ್ರವಾರ ರಾತ್ರಿ 9.10ರ ಸುಮಾರಿಗೆ ಚಿತ್ರದುರ್ಗದಲ್ಲಿ ಕನ್ನಡಪರ ಕಾರ್ಯಕರ್ತರು ದಾಳಿ ಮಾಡಿರುವ ಆರೋಪ ಕೇಳಿಬಂದಿದೆ. ಕಾರ್ಯಕರ್ತರು ಚಾಲಕ ಭಾಸ್ಕರ್ ಜಾಧವ್ ಅವರ ಮುಖಕ್ಕೂ ಕಪ್ಪು ಬಣ್ಣ ಬಳಿದು ಹಲ್ಲೆ ನಡೆಸಿದ್ದರು ಎಂದು ದೂರಲಾಗಿದೆ. ಈ ಸಂಬಂಧ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು‌. ಅಲ್ಲಿಯವರೆಗೂ ಕರ್ನಾಟಕಕ್ಕೆ ಬಸ್ ಸೇವೆಗಳನ್ನು ಪುನಾರಂಭಿಸಲಾಗುವುದಿಲ್ಲ ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರನಾಯಕ್ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ಉಭಯ ರಾಜ್ಯಗಳ ಪ್ರಯಾಣಿಕರಿಗೆ ಪರದಾಟ : ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಎರಡೂ ರಾಜ್ಯಗಳ ಪ್ರಯಾಣಿಕರು ಪರದಾಡುವಂತಾಗಿದೆ. ಕೂಡಲೇ ಎರಡೂ ಸರ್ಕಾರಗಳು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಸದ್ಯ ಕರ್ನಾಟಕ-ಮಹಾರಾಷ್ಟ್ರ ಗಡಿಯವರೆಗೆ ಮಾತ್ರ ಬಸ್​ಗಳು ಸಂಚರಿಸುತ್ತಿವೆ. ಅಲ್ಲಿಂದ ಮುಂದೆ ಅವರ ರಾಜ್ಯದ ಬಸ್​ಗಳಲ್ಲಿ ಜನರು ಸಂಚರಿಸುತ್ತಿದ್ದಾರೆ. ಇದರಿಂದ ಎರಡೂ ರಾಜ್ಯಗಳ ಜನಸಾಮಾನ್ಯರು ಪರದಾಡುವಂತಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.

ಇದನ್ನೂ ಓದಿ:ಬೆಳಗಾವಿ: ಕನ್ನಡ ಮಾತಾಡಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಆರೋಪ - ಡಿಸಿಪಿ ಹೇಳಿದ್ದೇನು?

ABOUT THE AUTHOR

...view details