ಎಂಎಲ್ಸಿ ರವಿಕುಮಾರ್ ಸುದ್ದಿಗೋಷ್ಠಿ (ETV Bharat) ಬೆಂಗಳೂರು: "2020ರ ಮುಡಾ ಸಭೆಯಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್ ನೀಡುವ ಬಗ್ಗೆ ನಿರ್ಣಯ ಆಗಿದೆ ಎನ್ನುತ್ತಿದ್ದಾರೆ. ಆದರೆ, ಅಂದಿನ ಸಭೆಯಲ್ಲಿ ಆ ಬಗ್ಗೆ ಚರ್ಚೆಯೇ ಆಗಿಲ್ಲ" ಎಂದು ಆರೋಪಿಸಿ, 2020ರಲ್ಲಿ ಮುಡಾ ಸಭೆಯಲ್ಲಿನ ನಡಾವಳಿಗಳು ಮತ್ತು ಆಡಿಯೋ ದಾಖಲೆಯನ್ನು ಬಿಜೆಪಿ ಬಿಡುಗಡೆ ಮಾಡಿ ಹೇಳಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಎಂಎಲ್ಸಿ ರವಿಕುಮಾರ್, 2020ರಲ್ಲಿ ಮುಡಾ ಸಭೆಯಲ್ಲಿನ ನಡಾವಳಿ ಮತ್ತು ಆಡಿಯೋ ದಾಖಲೆಯನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, "ಪರಿಹಾರ ಪೂರ್ಣ ನೀಡದೇ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೇ ಜಮೀನು ಉಪಯೋಗಿಸಿದ ಪ್ರಕರಣಗಳಲ್ಲಿ 50-50 ಅನುಪಾತದಲ್ಲಿ ನೀಡುವ ಮುಡಾ ನಿರ್ಣಯವನ್ನು 2023ರಲ್ಲಿ ರದ್ದು ಮಾಡಲಾಗಿದೆ. ಆದರೂ ಕೂಡಾ ಸಿದ್ಧರಾಮಯ್ಯ 2023ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 14 ಸೈಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಯಾವುದೇ ನಿರ್ಣಯ ಆಗದಿದ್ದರೂ ನಿರ್ಣಯ ಆಗಿದೆ ಎಂದು ಹೇಳಲಾಗಿದೆ. 2020ರಲ್ಲಿ ನಡೆದ ಸಭೆಯಲ್ಲಿ ಸಿಎಂ ಪತ್ನಿಯ ಸೈಟ್ ವಿಚಾರವೇ ಪ್ರಸ್ತಾಪ ಆಗಿಲ್ಲ. ಈ ಕುರಿತಾಗಿ ಅಂದಿನ ಸಭೆಯ ನಡಾವಳಿಗಳು ಮತ್ತು ಆಡಿಯೋ ದಾಖಲೆ ಬಿಡುಗಡೆ ಮಾಡಿದ್ದೇವೆ. ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಆಗದೇ ಇದ್ದರೂ ನಂತರ ಆಯುಕ್ತರಾಗಿದ್ದ ನಟೇಶ್ ಮತ್ತು ಅಧ್ಯಕ್ಷ ರಾಜೀವ್ ನಿರ್ಣಯ ಆಗಿದೆ ಎಂದು ನಡಾವಳಿಯಲ್ಲಿ ಸಹಿ ಮಾಡಿದ್ದಾರೆ. ರಾಜೀವ್ ಮತ್ತು ನಟೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು" ಎಂದು ಆಗ್ರಹಿಸಿದರು.
ಸರ್ಕಾರದ ಅನುಮತಿ ದೊರೆತಿರಲಿಲ್ಲ: "ಪ್ರಾಧಿಕಾರಗಳ ಬಡಾವಣೆಗಳಿಗೆ 2009ರಲ್ಲಿ 60-40 ಸೈಟ್ ಹಂಚಿಕೆ ನೀತಿ ಇತ್ತು. ಆಗ ರೈತರು ಜಮೀನು ಕೊಡಲು ಮುಂದೆ ಬರಲಿಲ್ಲ. 2015ರಲ್ಲಿ 50-50 ಅನುಪಾತ ತರಲಾಯಿತು. ಆದರೆ 50 - 50 ಅನುಪಾತಕ್ಕೆ ಸರ್ಕಾರದ ಅನುಮತಿ ದೊರೆತಿರಲಿಲ್ಲ. ನಂತರ 2020ರಲ್ಲಿ ಈ ಅನುಪಾತವನ್ನು ರದ್ದು ಮಾಡಲಾಗಿತ್ತು. ಆದರೆ, 2023ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 14 ಸೈಟ್ ಕೊಟ್ಟಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಆಗ 50-50 ಅನುಪಾತ ಜಾರಿಯಲ್ಲಿಯೇ ಇರಲಿಲ್ಲ. 2020ರಲ್ಲಿಯೇ ರದ್ದಾಗಿತ್ತು. ಮುಡಾದಲ್ಲಿ ನಿರ್ಣಯವೇ ಆಗದೇ ಅಧಿಕಾರಿಗಳು ಸುಳ್ಳು ಹೇಳಿದ್ದಾರೆ. ಈ ಫೇಕ್ ನಿರ್ಣಯದ ಮೇಲೆ ಸೈಟ್ಗಳನ್ನು ಹಂಚಿಕೆ ಮಾಡಲಾಗಿದೆ."
ಫೇಕ್ ರೆಸಲ್ಯೂಷನ್:"ಬೋರ್ಡ್ ಮೀಟಿಂಗ್ನಲ್ಲಿ 50-50 ಅನುಪಾತ ಎಂದು ಫೇಕ್ ರೆಸಲ್ಯೂಷನ್ ಮಾಡಲಾಗಿದೆ. ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಮುಡಾ ಅಕ್ರಮಗಳ ಬಗ್ಗೆ ತನಿಖೆಗೆ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಮುಡಾದಲ್ಲಿ ಏನೇನು ಅಕ್ರಮಗಳಾಗಿವೆ ಎಂದು ಆ ವರದಿಯಲ್ಲಿದೆ. ಆ ವರದಿ ಈಗ ಸರ್ಕಾರದ ಬಳಿ ಇದೆ. ಸರ್ಕಾರ ವರದಿಯನ್ನು ಬಹಿರಂಗಪಡಿಸಲಿ. ಸೈಟ್ಗಿಂತ ಸಂವಿಧಾನ ದೊಡ್ದದು. 2ನೇ ಅಂಬೇಡ್ಕರ್ ಅಂತಾ ಕರೆಸಿಕೊಳ್ಳುವ ಸಿದ್ದರಾಮಯ್ಯ ಸೈಟ್ ವಾಪಸ್ ಕೊಡುತ್ತಾರಾ? ಸಿದ್ದರಾಮಯ್ಯ ತನಿಖೆಗಿಂತ ಅತೀತರಾ? ಕರ್ನಾಟಕದಲ್ಲಿ ನಿಮಗಿಂತ ಪ್ರಾಮಾಣಿಕರು ಯಾರೂ ಇಲ್ವಾ? ಮುಡಾ ಪ್ರಕರಣ ಸಿಬಿಐಗೆ ಕೊಡಬೇಕು. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ನಿಜವಾದ ಅವತಾರ ಈಗ ಗೊತ್ತಾಗುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ಗೆ ಹಾವೇರಿ ವಿವಿ ರಿಜಿಸ್ಟ್ರಾರ್ ಆಗಿ ನೇಮಕ ಕುರಿತು ಮಾತನಾಡಿ, "ಸರ್ಕಾರದಲ್ಲಿ ಅಕ್ರಮ ಮಾಡಿದವರನ್ನು ಸಸ್ಪೆಂಡ್ ಮಾಡುವುದು ಬಿಟ್ಟು ಬಳುವಳಿ ಕೊಟ್ಟಿದ್ದಾರಾ? ಹಾಗಾದರೆ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಈ ಸರ್ಕಾರವನ್ನು ವಜಾ ಮಾಡುವುದೇ ಲೇಸು. ಸರ್ಕಾರ ಹೇಗೆ ಅವರನ್ನು ಕುಲಸಚಿವರನ್ನಾಗಿ ಮಾಡಿತು? ರಾಜ್ಯಪಾಲರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಅಕ್ರಮ ಮಾಡಿದವರನ್ನು ನೇಮಕ ಮಾಡಿದರೆ ವಿವಿ ಪರಿಸ್ಥಿತಿ ಏನಾಗಬಹುದು? ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು" ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್: ಆ.31ಕ್ಕೆ ವಿಚಾರಣೆ ಮುಂದೂಡಿಕೆ, ಸಿದ್ದರಾಮಯ್ಯಗೆ ಮತ್ತೆರಡು ದಿನ ರಿಲೀಫ್ - Muda Scam