ಮಂಡ್ಯ: ಮಂಡ್ಯದಲ್ಲಿಂದು ನಡೆದ ಬಹಿರಂಗ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಮಾತನಾಡಿ, ಎಸ್.ಎಂ.ಕೃಷ್ಣ, ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟಿರುವ ಪುಣ್ಯ ಭೂಮಿ ಮಂಡ್ಯ. ಅಹಿಂದ ಹೆಸರು ಹೇಳಿಕೊಂಡು ಸಿದ್ದರಾಮಯ್ಯ ಅಧಿಕಾರ ಹಿಡಿದಿದ್ದಾರೆ. ಇದೀಗ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ ಎಂದರು.
ಭ್ರಷ್ಟ ಮುಖ್ಯಮಂತ್ರಿಯಿಂದ ಜನರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಸರ್ಕಾರ ಹಗಲು ದರೋಡೆ ಮಾಡ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಸಹ ಆತ್ಮಹತ್ಯೆಗೆ ಶರಮಾಗಿದ್ದಾರೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಈ ಸರ್ಕಾರ ಅನ್ಯಾಯ ಮಾಡ್ತಿದೆ ಎಂದು ಟೀಕಿಸಿದರು.
ಎಸ್‌ಐಟಿ ಅಂದ್ರೆ ಸಿದ್ದರಾಮಯ್ಯ ಇನ್ವೆಸ್ಟಿಗೇಶನ್ ಟೀಂ. ನಾವು ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡ್ತಿದ್ದೀವಿ. ಭ್ರಷ್ಟ ಸಿಎಂ ಸಿದ್ದರಾಮಯ್ಯರನ್ನು ಕೆಳಗಿಳಿಸುವವರೆಗೆ ನಮ್ಮ ಹೋರಾಟ ನಿಲ್ಲಲ್ಲ. ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆಗೆ ಜನ ಬಂದಿದ್ದಾರೆ ಎಂದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, 5ನೇ ದಿನ ಮಂಡ್ಯ ನಗರಕ್ಕೆ ಪ್ರವೇಶ ಮಾಡಿದ್ದೇವೆ. ರಾಜ್ಯ ಸರ್ಕಾರದ ನಡವಳಿಕೆಗಳು ಅನಾವರಣವಾಗ್ತಿವೆ. ಆರಂಭದಲ್ಲಿ ಸ್ವಚ್ಛ ಆಡಳಿತ ಕೊಡ್ತೀವಿ ಅಂತಾ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ದಿನದಿಂದ ಸಂಪೂರ್ಣ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಮಂಡ್ಯ ಜನ 2019ರಲ್ಲೂ ನಿಖಿಲ್‌ಗೆ ಅಶೀರ್ವಾದ ಮಾಡಿದ್ದೀರಿ. ಅದನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ನ ಕಾರ್ಯಕರ್ತರಿಗೆ ವಂದನೆಗಳು. ಈ ಪಾದಯಾತ್ರೆ ಯಾರ ಮೇಲಿನ ದ್ವೇಷಕ್ಕಾಗಿ ಮಾಡ್ತಿರೋದಲ್ಲ. ಸ್ವಲ್ಪ ದಿನ ಅವಕಾಶ ಕೊಡುವುದು ಸಹಜ. ಆದ್ರೆ ಜನ ಇವತ್ತು ಛೀ ಥೂ ಅಂತಾ ಹೃದಯದಿಂದ ಶಾಪ ಹಾಕ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ ಸಿಡಿ ಶಿವು- ಹೆಚ್ಡಿಕೆ: ಕೊಚ್ಚೆಗಳ ಬಗ್ಗೆ ಮಾತಾಡಬಾರದು ಅಂತಾ ಸಲಹೆ ಕೊಡ್ತಾರೆ ಜನ. ನಾನೂ ಮಾತನಾಡಬಾರದು ಅಂತಿದ್ದೆ. ನಿನ್ನೆ ಒಂದು ವಿಡಿಯೋ ಪ್ಲೇ ಮಾಡಿದ್ದಾರೆ. ನಾನು ಅದಕ್ಕೆ ಹೇಳಿದ್ದು ಸಿಡಿ ಶಿವು ಅಂತಾ. ಎಲ್ಲೋಗುತ್ತೆ ವಿಡಿಯೋ ಬಿಡುವ ಚಾಳಿ?. ಹಳೇ ವಿಡಿಯೋ ಬಿಟ್ಟಿದ್ದೀರಲ್ಲ. ನಿಮ್ಮ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್ ಬಗ್ಗೆ ಏನೆಲ್ಲಾ ಮಾತಾಡಿಲ್ಲ. ಅದನ್ನೆಲ್ಲಾ ಮರೆತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಒಂದು ವಿಷಯ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸಚಿವನಾದರೆ ಮೇಕೆದಾಟುಗೆ ಅನುಮತಿ ಕೊಡ್ತೀನಿ ಅಂದಿದ್ರು ಅಂತಾರೆ. ನಾನು ಹೇಳಿದ್ದು ನಿಮ್ಮ ತಮಿಳುನಾಡಿನ ಸಹೋದರರನ್ನು ಒಪ್ಪಿಸಿ ಅಂತ. ಮಳೆ ಆಗಲು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಕಾರಣ. ಕೆಆರ್‌ಎಸ್ ತುಂಬಿ ತಮಿಳುನಾಡಿಗೆ ಹರಿದೋಯ್ತು. ಆದ್ರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೊಪ್ಪ ಭಾಗಕ್ಕೆ ನೀರು ಹೋಗಿಲ್ಲ. ದೇವೇಗೌಡರು ಕಾವೇರಿ ಬಗ್ಗೆ ಚರ್ಚೆ ಮಾಡ್ತಿದ್ರೆ ನಿಮ್ಮ ಡಿಎಂಕೆ ಗದ್ದಲ ಎಬ್ಬಿಸುತ್ತಾರೆ. ಖರ್ಗೆ ಮತ್ತು ಕಾಂಗ್ರೆಸ್‌ನವರು ಯಾಕೆ ದೇವೇಗೌಡರ ಸಹಾಯಕ್ಕೆ ಬರ್ತಿಲ್ಲ?. ನಮ್ಮ ಪರ್ಮಿಷನ್ ಕೇಳುವ ನೀವು ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಸಿ.ಟಿ.ರವಿ - C T Ravi