ಹಾಸನ:ಮಾಜಿ ಸಚಿವ ಹೆಚ್. ಡಿ. ರೇವಣ್ಣ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಸಂಬಂಧ ವಿಶೇಷ ತನಿಖಾ ತಂಡವು ಸಂತ್ರಸ್ತ ಮಹಿಳೆಯನ್ನು ಶನಿವಾರ ರೇವಣ್ಣ ನಿವಾಸಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದೆ.
ಹೆಚ್. ಡಿ. ರೇವಣ್ಣ ಅವರ ಅಡುಗೆ ಮನೆ, ಬೆಡ್ ರೂಂ ಹಾಗೂ ಸ್ಟೋರ್ ರೂಂನಲ್ಲಿ ಎಸ್‌ಐಟಿ ಟೀಂ ಮಹಜರು ನಡೆಸಿದೆ. ಮನೆಯಲ್ಲಿ ಹೆಚ್. ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಇಲ್ಲದ ವೇಳೆ ಈ ಮೂರು ಕಡೆ ದೌರ್ಜನ್ಯ ನಡೆಸಿದ್ದ ಬಗ್ಗೆ ಸಂತ್ರಸ್ತೆಯು ಆರೋಪ ಮಾಡಿದ್ದರು. ಹೀಗಾಗಿ ಮನೆಯಲ್ಲಿ ಸಂತ್ರಸ್ತೆ ಕಡೆಯಿಂದ ಮಾಹಿತಿ ಪಡೆದು, ಸ್ಥಳ ಮಹಜರು ನಡೆಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಹೊಳೆನರಸೀಪುರ ಶಾಸಕ ಹೆಚ್. ಡಿ. ರೇವಣ್ಣ ವಿರುದ್ಧ ಮಹಿಳೆಯೊಬ್ಬರು ಇತ್ತೀಚೆಗೆ ದೂರು ನೀಡಿದ್ದರು. ಅದರ ಅನ್ವಯ ಇಬ್ಬರೂ ನಾಯಕರ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೂರು ನೀಡಿದ್ದರು. ಎಫ್ಐಆರ್ನಲ್ಲಿ ಹೆಚ್. ಡಿ. ರೇವಣ್ಣ ಎ1 ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಎ2 ಆರೋಪಿಯಾಗಿ ನಮೂದಿಸಲಾಗಿದೆ. ಸದ್ಯ ಪ್ರಕರಣದ ಬಗ್ಗೆ ಎಸ್‌ಐಟಿ ತಂಡವು ತನಿಖೆ ನಡೆಸುತ್ತಿದೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಪ್ರಕರಣ: ಭವಾನಿ ರೇವಣ್ಣಗೆ ಎಸ್‌ಐಟಿ ನೋಟಿಸ್ - SIT Notice to Bhavani Revanna