ಬೆಳಗಾವಿ:ಇಲ್ಲಿರುವಅಕ್ಕ-ತಂಗಿ ಪುರುಷ ಪ್ರಧಾನ ಸಮಾಜಕ್ಕೆ ಸಡ್ಡು ಹೊಡೆದು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇದ್ದರೆ ಇಂಥ ಅಕ್ಕ-ತಂಗಿ ಇರಬೇಕು ಎನ್ನುವಂತೆ ಇಡೀ ಊರಿಗೆ ಮಾದರಿಯಾಗಿದ್ದಾರೆ. ಇವರು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಬಸವರಾಜ ಮತ್ತು ಶಕುಂತಲಾ ಮರಡಿ ದಂಪತಿಯ ಪುತ್ರಿಯರು. ಇವರ ಆರು ಜನ ಹೆಣ್ಣು ಮಕ್ಕಳ ಪೈಕಿ ಕೊನೆಯವರೇ ಸುಜಾತಾ ಮತ್ತು ರೂಪಾ. ನಾಲ್ಕು ಜನ ಹೆಣ್ಣುಮಕ್ಕಳ ಮದುವೆಯಾದ ಬಳಿಕ ಇವರು ಸಹ ಮದುವೆಯಾಗಿ ಗಂಡನ ಮನೆಗೆ ಹೋಗಿ, ಸುಖ ಸಂಸಾರ ಮಾಡಬಹುದಿತ್ತು. ಆದರೆ, ತಂದೆ-ತಾಯಿಯನ್ನು ನೋಡಿಕೊಳ್ಳುವವರು ಯಾರೆಂದು ಯೋಚಿಸಿ ಈ ಸಹೋದರಿಯರು ಮದುವೆಯನ್ನೇ ಆಗಿಲ್ಲ.
ಬಸವರಾಜ ಮತ್ತು ಶಕುಂತಲಾ ಅವರಿಗೆ ಗಂಡು ಮಕ್ಕಳಿಲ್ಲ ಎನ್ನುವ ಕೊರಗು ಒಂದಿಷ್ಟೂ ಕಾಡದಂತೆ ನೋಡಿಕೊಳ್ಳುತ್ತಿರುವ ಅಕ್ಕ-ತಂಗಿ, ಗಂಡುಮಕ್ಕಳಂತೆ ಶರ್ಟ್, ಪ್ಯಾಂಟ್ ಧರಿಸುತ್ತಾರೆ. ತಲೆಗೊಂದು ವಸ್ತ್ರ ಕಟ್ಟಿಕೊಂಡು ಕೃಷಿ ಕಾಯಕ ಮಾಡುತ್ತಾರೆ. ಉತ್ತುವುದು, ಬಿತ್ತುವುದು, ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ರೆಂಟೆ– ಕುಂಟೆ–ಗಳೆ ಹೊಡೆಯವುದು, ಕೊಯ್ಲು–ರಾಶಿ, ಮಾರುಕಟ್ಟೆಗೆ ಸಾಗಿಸುವುದು ಸೇರಿ ಎಲ್ಲಾ ಕೆಲಸಗಳನ್ನು ಈ ಸಹೋದರಿಯರೇ ಲೀಲಾಜಾಲವಾಗಿ ಮಾಡುತ್ತಾರೆ.
ಈ ಸಹೋದರಿಯರಿಗೆ ಒಂದೂವರೆ ಎಕರೆ ಸ್ವಂತ ಜಮೀನು ಇದ್ದು, ಅಕ್ಕ ಪಕ್ಕದವರ 18 ಎಕರೆ ಜಮೀನಿನಲ್ಲಿ ಪಾಲುದಾರಿಕೆಯಲ್ಲಿ ಉಳುಮೆ ಮಾಡುತ್ತಾರೆ. ಕಬ್ಬು, ಭತ್ತ, ತರಕಾರಿ ಸೇರಿ ಇತರೆ ಬೆಳೆ ಬೆಳೆಯುತ್ತಾರೆ. ಪ್ರತಿವರ್ಷ ಏನಿಲ್ಲ ಅಂದರೂ ಎಲ್ಲಾ ಖರ್ಚು ತೆಗೆದು 4 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಎರಡು ಎಮ್ಮೆಗಳಿದ್ದು, ಹಾಲು ಮಾರಾಟ ಮಾಡಿ ಆರ್ಥಿಕ ಸಬಲತೆ ಸಾಧಿಸಿದ್ದಾರೆ. ತಮ್ಮ ಹೊಲದಲ್ಲಿ 21 ಲಕ್ಷ ರೂ. ವೆಚ್ಚ ಮಾಡಿ ಮನೆ ಕಟ್ಟಿಸಿ ತಂದೆ, ತಾಯಿ ಜೊತೆಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
ಅಕ್ಕ-ತಂಗಿ ಜೋಡೆತ್ತು:ಸುಜಾತಾಗೆ 40 ವರ್ಷ, ರೂಪಾಗೆ 38 ವರ್ಷ. ಹುಟ್ಟಿದಾಗಿನಿಂದ ಇಬ್ಬರೂ ಒಬ್ಬರಿಗೊಬ್ಬರು ಒಂದು ದಿನ ಕೂಡ ಬಿಟ್ಟಿಲ್ಲ. ಹೊಲದ ಕೆಲಸ, ಊರು, ಸಂತೆಗೂ ಜೊತೆಯಾಗಿಯೇ ಹೋಗುತ್ತಾರೆ. ಸುಜಾತಾ 5ನೇ ತರಗತಿ, ರೂಪಾ 4ನೇ ತರಗತಿವರೆಗೆ ಮಾತ್ರ ಓದಿದ್ದಾರೆ. ಆದರೆ, ಲೆಕ್ಕಪತ್ರದಲ್ಲಿ ರೂಪಾ ತುಂಬಾ ಜಾಣೆ. ಶಿಕ್ಷಣ ಇಲ್ಲದಿದ್ದರೂ ವ್ಯವಹಾರಜ್ಞಾನ ಇವರಲ್ಲಿ ಸಾಕಷ್ಟಿದೆ. ಸುಜಾತಾ 10 ವರ್ಷದವರಿದ್ದಾಗ ಸೈಕಲ್ ಮೇಲಿಂದು ಬಿದ್ದು ಎಡಗಣ್ಣು ಕಳೆದುಕೊಂಡಿದ್ದಾರೆ. ಒಂಟಿಗಣ್ಣಿನಿಂದಲೇ ಸಹೋದರಿ ರೂಪಾಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಜನರು ಈಗ "ಭಲೇ ಹೆಣ್ಣು ಹುಲಿಗಳು" ಎಂದು ಕೊಂಡಾಡುತ್ತಿದ್ದಾರೆ.