ಬೆಳಗಾವಿ:ಸೂರ್ಯ- ಚಂದ್ರರು ಇರುವುದು ಎಷ್ಟು ಸತ್ಯವೋ?. ಡಿ.10ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ, ನಮ್ಮ ನೋವನ್ನು ವ್ಯಕ್ತಪಡಿಸಿ, ಮೀಸಲಾತಿ ಪಡೆಯೋದು ಕೂಡ ಅಷ್ಟೇ ಸತ್ಯ. ಹಾಗಾಗಿ, ಸಮಾಜ ಬಾಂಧವರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗಲೂ ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ, ಹೋರಾಟ ಮಾಡಿದ್ದೇವೆ. ಹಾಗಾಗಿ, ಡಿ.10ರಂದು ವಕೀಲರ ಪರಿಷತ್ ಮುಂದಾಳತ್ವದಲ್ಲಿ ಸುಮಾರು 5 ಸಾವಿರ ಟ್ರ್ಯಾಕ್ಟರ್ಗಳೊಂದಿಗೆ ಲಕ್ಷಾಂತರ ಪಂಚಮಸಾಲಿಗರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.
ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ:ನಮ್ಮ ಪಂಚಮಸಾಲಿ ಮೀಸಲಾತಿ ಹೋರಾಟ ಗಟ್ಟಿ ನಿರ್ಧಾರವಾಗಿದೆ. ನಾವು ಚನ್ನಮ್ಮನ ವಂಶಸ್ಥರು. ಬ್ರಿಟಿಷರ ಲಾಠಿ, ಬೂಟಿನ ಏಟಿಗೆ ಹೆದರದವರ ನಾವು. ಜನಪ್ರತಿನಿಧಿಗಳ ಮನಸ್ಥಿತಿ ಬದಲಾಗಬಹುದು. ಆದರೆ, ನಮ್ಮೆಲ್ಲರ ಮನಸ್ಥಿತಿ ಎಂದೂ ಬದಲಾಗಬಾರದು. ನಮ್ಮ ನ್ಯಾಯಯುತ, ಪ್ರಾಮಾಣಿಕ ಹೋರಾಟದಲ್ಲಿ ಪಾಲ್ಗೊಳ್ಳಲು ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಸರ್ಕಾರ ಹೋರಾಟದಲ್ಲಿ ಪಾಲ್ಗೊಳ್ಳಲು ಬರುವ ಸಮಾಜ ಬಾಂಧವರನ್ನು ತಡೆಯಲು ಯತ್ನಿಸಿದರೆ, ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಡಿ.10ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ಕರೆಯಲಾಗುವುದು. ಇನ್ನು ಡಿ.1ರಂದು ಬೆಳಗಾವಿ ಮಹಾಂತೇಶ ಭವನದಲ್ಲಿ ಪಂಚಮಸಾಲಿ ಸಮಾಜದ ಹಾಲಿ, ಮಾಜಿ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಈ ವೇಳೆ ಯಾವ ರೀತಿ ಸೌಧಕ್ಕೆ ಮುತ್ತಿಗೆ ಹಾಕಬೇಕೆಂದು ಮುಕ್ತವಾಗಿ ಚರ್ಚಿಸುತ್ತೇವೆ ಎಂದರು.