ಮೈಸೂರು: "ಮುಡಾ ಪ್ರಕರಣ ಆದ ನಂತರ ಸಿದ್ದರಾಮಯ್ಯನವರಿಗೆ ದೇವರ ಮೇಲೆ ಭಕ್ತಿ ಬಂದಿದೆ. ಈಗ ದೇವರನ್ನು ಹುಡುಕಿಕೊಂಡು ಹೋಗಿ ದರ್ಶನ ಮಾಡಿ, ಕುಂಕುಮ ಹಾಕಿಕೊಳ್ಳತ್ತಿದ್ದಾರೆ" ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಸಿದ್ದರಾಮಯ್ಯರಿಗೆ ಈಗ ದೇವರು ಮಠಗಳು ನೆನಪಾಗಿವೆ. ಮುಡಾ ವಿಚಾರ ಮುನ್ನೆಲೆಗೆ ಬಂದ ಮೇಲಂತೂ ಅವರಿಗೆ ಹೆಚ್ಚಿನ ಭಕ್ತಿ ಬಂದಿದೆ. ಮೊದಲು ಕುಂಕುಮವೇ ಹಾಕಿಸಿಕೊಳ್ಳುತ್ತಿರಲಿಲ್ಲ. ಈಗ ಹುಡುಕಿಕೊಂಡು ಹೋಗಿ ದೇವರ ದರ್ಶನ ಮಾಡುತ್ತಿದ್ದಾರೆ. ಇದೆಲ್ಲಾ ಮುಡಾ ವಿಚಾರದ ಪ್ರಭಾವ" ಎಂದು ಹೇಳಿದರು.
"ದೀಪಕ್ಕೆ ಸಿಕ್ಕ ಪತಂಗದಂತಾಗಿದೆ ಕಾಂಗ್ರೆಸ್ ಸರ್ಕಾರದ ಸ್ಥಿತಿ. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿಕೊಳ್ಳುತ್ತಿದೆ. ಒಂದು ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಿದೆ. ಮುಡಾ, ವಕ್ಫ್ ಎಲ್ಲದರಲ್ಲೂ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ. ಈ ವಿಚಾರಗಳು ಈ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುವುದಿಲ್ಲ. ಉಪಚುನಾವಣೆ ನಡೆಯುವುದೇ ಬೇರೆ ರೀತಿ. ಹಣ ಬಲ, ವೈಯುಕ್ತಿಕ ಬಲ, ಅಧಿಕಾರ ದುರುಪಯೋಗ ಎಲ್ಲವೂ ಇರುತ್ತದೆ. ಹೀಗಿದ್ದರೂ ಮೂರು ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲ್ಲುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.