ಬೆಂಗಳೂರು:ಮೂರನೇ ಬಾರಿಗೆ ಲೋಕಸಭೆ ಪ್ರವೇಶಕ್ಕೆ ಮುಂದಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಕಳೆದ ಎರಡು ಸಲ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದರು.
ಸಂಜಯ್ ನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪೂಜೆ ಸಲ್ಲಿಸಿದರು. ನಂತರ 10.00 ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿದ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಸಚಿವರಾದ ಬೈರತಿ ಬಸವರಾಜ್, ಗೋಪಾಲಯ್ಯ, ಮುನಿರಾಜು ಹಾಗೂ ಜೆಡಿಎಸ್ ನಾಯಕ ಜವರಾಯಿಗೌಡ ಜೊತೆ ಶೋಭಾ ಕರಂದ್ಲಾಜೆ ಆಗಮಿಸಿದ್ದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ, ''ನಮ್ಮ ಕ್ಷೇತ್ರದಲ್ಲಿ 32 ಲಕ್ಷ ಮತದಾರರಿದ್ದಾರೆ, 3335 ಬೂತ್ ಇವೆ, ಇಷ್ಟು ದೊಡ್ಡ ಕ್ಷೇತ್ರದಲ್ಲಿ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಸದಾನಂದಗೌಡರು ದೊಡ್ಡ ಅಂತರದಿಂದ ಗೆದ್ದಿದ್ದರು. ಈಗ ಬೈರತಿ ಬಸವರಾಜ್, ಗೋಪಾಲಯ್ಯ ಅವರಂತಹ ನಾಯಕರ ಆಗಮನವು ನಮಗೆ ಹೆಚ್ಚಿನ ಶಕ್ತಿ ನೀಡಿದೆ. ಜೆಡಿಎಸ್ ಪಕ್ಷವು ಎನ್ಡಿಎಗೆ ಸೇರಿರುವುದು ನಮ್ಮ ಬಲ ಹೆಚ್ಚಿಸಿದೆ. ಮೋದಿಯನ್ನು ಮತ್ತೆ ಪ್ರಧಾನಿಯಾಗಿ ನೋಡಲು ಜನತೆ ಬಯಸಿದ್ದಾರೆ. ಮನೆ ಮನೆಗೆ ಹೋಗಿ ಮೋದಿ ಸಾಧನೆ ಜನತೆಗೆ ತಿಳಿಸಬೇಕು, ಮತದಾನದ ಪ್ರಮಾಣ ಹೆಚ್ಚಿಸಬೇಕು ಇದು ನಮ್ಮ ಗುರಿ'' ಎಂದರು.
''ಸದಾನಂದಗೌಡರು ನಮ್ಮ ಜೊತೆ ಎಲ್ಲಾ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಪಕ್ಷದಿಂದ ಚಾಮರಾಜನಗರದ ನಿಯೋಜನೆ ಮಾಡಿದ್ದಾರೆ. ಹಾಗಾಗಿ, ಅವರು ಅಲ್ಲಿ ಹೋಗಿದ್ದಾರೆ. ಎಸ್.ಟಿ. ಸೋಮಶೇಖರ್ ನಿರ್ಧಾರ ಇನ್ನೂ ತಿಳಿಸಿಲ್ಲ. ಅವರು ಬಿಜೆಪಿ ಶಾಸಕರು, ಹಾಗಾಗಿ ಬಿಜೆಪಿಗೆ ಕೆಲಸ ಮಾಡಬೇಕು ಎಂದು ಕೇಳುತ್ತೇನೆ. ಮನಸ್ಸು, ದೇಹ ಒಂದೇ ಕಡೆ ಇರಿಸಿಕೊಂಡು ಕೆಲಸ ಮಾಡಿ ಎನ್ನುತ್ತೇನೆ'' ಎಂದು ಹೇಳಿದರು.