ಶಿವಮೊಗ್ಗ ಹಿಂದೂ ಮಹಾಸಭಾ ಗಣಪನ ನಿಮಜ್ಜನ ಮೆರವಣಿಗೆ (ETV Bharat) ಶಿವಮೊಗ್ಗ:ನಗರದ ಹಿಂದೂ ಮಹಾಮಂಡಳದ ಗಣೇಶ ನಿಮಜ್ಜನಪೂರ್ವ ಮೆರವಣಿಗೆಯು ಭೀಮೇಶ್ವರ ದೇವಾಲಯದಿಂದ ಪ್ರಾರಂಭವಾಗಿದೆ. ಗಣೇಶನಿಗೆ ವಿಶೇಷವಾಗಿ ಅಲಂಕಾರ ಮಾಡಿದ್ದು, ಮೆರವಣಿಗೆಯಲ್ಲಿ ರಸ್ತೆ ಉದ್ಧಕ್ಕೂ ಜನರು ದರ್ಶನ ಪಡೆಯುತ್ತಿದ್ದಾರೆ.
ಈ ಮಾರ್ಗದಲ್ಲಿ ಮೆರವಣಿಗೆ:ಎಸ್ ಪಿ ಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಟಿ.ಶೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ, ಡಾ.ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಕೋಟೆ ಪೊಲೀಸ್ ಠಾಣೆ ರಸ್ತೆಯ ಮೂಲಕ ಪುನಃ ಭೀಮೇಶ್ವರ ದೇವಾಲಯದ ಬಳಿ ತೆರಳಿ ಪಕ್ಕದ ತುಂಗಾ ನದಿಯ ಭೀಮನ ಮಡುವಿನಲ್ಲಿ ಗಣೇಶನ ನಿಮಜ್ಜನ ನೆರವೇರಲಿದೆ.
ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿವೆ. ಯುವಕರು - ಯುವತಿಯರು ಹಾಗೂ ಮಹಿಳೆಯರು ಭರ್ಜರಿ ಡ್ಯಾನ್ಸ್ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ. ಗಣೇಶ ಮೆರವಣಿಗೆ ಉದ್ದಕ್ಕೂ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಪ್ರಸಾದ, ಅನ್ನ ಸಂತರ್ಪಣೆ, ಕುಡಿಯಲು ನೀರಿನ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಯು ನಗರದಲ್ಲಿ ಬಿಗಿ ಭದ್ರತೆಗಾಗಿ ಸುಮಾರು 3,500 ಪೊಲೀಸರನ್ನು ನೇಮಿಸಲಾಗಿದೆ. ನಗರ ಅಷ್ಟೇ ಅಲ್ಲ ಹೊರ ಭಾಗದಲ್ಲೂ ಸಹ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಗಣೇಶನಿಗೆ ನೋಟಿನ ಹಾರ:ಹಿಂದೂ ಮಹಾಮಂಡಳದ ಗಣೇಶನ ಮೆರವಣಿಗೆ ಸಾಗುವ ಪ್ರತಿ ಭಾಗದಲ್ಲೂ ಸಹ ವಿವಿಧ ಗಾತ್ರದ, ವಿವಿಧ ಬಣ್ಣದ ಹೂವಿನ ಹಾರ ಹಾಕಲಾಗುತ್ತಿದೆ. ಆದರೆ, ಈ ಬಾರಿ ಶಿವಮೊಗ್ಗದಲ್ಲಿ ಎರಡು ಕಡೆ ನೋಟಿನ ಹಾರ ಹಾಕಲಾಗುತ್ತಿದೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿ ಯೋಗೀಶ್ ಅವರು 10 ಹಾಗೂ 20 ರೂಗಳಲ್ಲಿ ತಯಾರಿಸಿದ ನೋಟಿನ ಹಾರವನ್ನು ಹಾಕುತ್ತಿದ್ದಾರೆ.
ಅದೇ ರೀತಿ ಗಾಂಧಿ ಬಜಾರ್ನ ಬಟ್ಟೆ ಮಾರ್ಕೆಟ್ನಲ್ಲಿಯೂ ಸಹ ನೋಟಿನ ಹಾರ ಹಾಕಲಾಗುತ್ತಿದೆ. ನೋಟಿನ ಹಾರದ ಕುರಿತು ಮಾತನಾಡಿದ ಯೋಗೇಶ್ ಅವರು, ನಮ್ಮ ಹಿಂದೂ ಮಹಾಮಂಡಳದ ಗಣಪತಿ ಪ್ರತಿಷ್ಠಾಪಿಸಿ 80 ವರ್ಷಗಳಾಗಿವೆ. ಇದರ ಸವಿ ನೆನಪಿಗಾಗಿ ನಾವು 80 ಸಾವಿರ ರೂ ಮೌಲ್ಯದ 10 ಹಾಗೂ 20 ರೂ ನೋಟಿನಲ್ಲಿ ಹಾರ ತಯಾರಿಸಿದ್ದೇವೆ. ಕಳೆದ ವರ್ಷ ಒಣ ಕೊಬ್ಬರಿ ಹಾರ ಹಾಕಲಾಗಿತ್ತು. ಈ ಹಾರನ್ನು ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಗಣೇಶನಿಗೆ ಅರ್ಪಿಸಲಾಗುವುದು. ನಂತರ ಈ ಹಾರವನ್ನು ಭೀಮೇಶ್ವರ ದೇವಾಲಯದ ಅಭಿವೃದ್ಧಿಗೆ ನೀಡಲಾಗುವುದು ಎಂದರು.
ಬಿಗಿ ಭದ್ರತೆ: ನಗರದಲ್ಲಿ ನಡೆಯುವ ಹಿಂದೂ ಮಹಾಮಂಡಳಿ ಗಣಪತಿ ಮೆರವಣಿಗೆಯ ಬಂದೋಬಸ್ತ್ ಕರ್ತವ್ಯಕ್ಕೆ 03 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 25 ಪೊಲೀಸ್ ಉಪಾಧೀಕ್ಷಕರು, 60 ಪೊಲೀಸ್ ನಿರೀಕ್ಷಕರು, 110 ಪೊಲೀಸ್ ಉಪನಿರೀಕ್ಷಕರು, 200 ಸಹಾಯಕ ಪೊಲೀಸ್ ನಿರೀಕ್ಷಕರು, 3,500 ಪೊಲೀಸ್ ಹೆಡ್ ಕಾನ್ಸ್ಟೇಬಲ್, ಪೊಲೀಸ್ ಕಾನ್ಸ್ಟೇಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿ, 01-RAF ತುಕಡಿ, 08 ಡಿಎಆರ್ ತುಕಡಿ, 01 QRT ತುಕಡಿ, 01 DSWAT ತುಕಡಿ, 10 ಕೆಎಸ್ಆರ್ಪಿ ತುಕಡಿ, 05 ದ್ರೋಣ್ ಕ್ಯಾಮರಾಗಳು, 100 ವಿಡಿಯೋಗ್ರಾಫರ್ಗಳನ್ನು ನಿಯೋಜಿಸಲಾಗಿದೆ ಎಂದುಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಸೀದಿ ಕಮಿಟಿಯಿಂದ ಗಣಪತಿಗೆ ಹಾರ: ಸೌಹರ್ದತೆಗೆ ಸಾಕ್ಷಿಯಾದ ಶಿವಮೊಗ್ಗ - Garland to Ganesha