ಶಿವಮೊಗ್ಗ :ಶೀಘ್ರದಲ್ಲಿ ಶಿವಮೊಗ್ಗ ಹಾಗೂ ಚೆನ್ನೈ ನಡುವೆ ನೇರ ಹಾಗೂ ನಿತ್ಯ ರೈಲು ಸಂಚಾರ ಮಾಡಲಿದೆ ಎಂದು ಸಂಸದ ಬಿ. ವೈ ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಿಂದ ಚೆನ್ನೈಗೆ ನೇರ ರೈಲು ಸಂಚಾರಕ್ಕೆ ಕೇಂದ್ರದ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಹಾಗೂ ರೈಲ್ವೆ ಇಲಾಖೆ ರಾಜ್ಯ ಸಚಿವರಾದ ಸೋಮಣ್ಣ ಅನುಮೋದನೆ ನೀಡಿದ್ದಾರೆ ಎಂದ ಅವರು ಇಬ್ಬರಿಗೂ ಅಭಿನಂದನೆ ಸಲ್ಲಿಸಿದರು.
ಶಿವಮೊಗ್ಗದಿಂದ ನಿತ್ಯ ಸಂಜೆ 4 ಗಂಟೆಗೆ ಹೊರಟು ಬೆಳಗ್ಗೆ 4:45ಕ್ಕೆ ರೈಲು ಚೆನ್ನೈ ತಲುಪಲಿದೆ. ಅದೇ ದಿನ ರಾತ್ರಿ 11 ಗಂಟೆಗೆ ಚೆನ್ನೈಯಿಂದ ಹೊರಡುವ ರೈಲು ಮರುದಿನ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗಕ್ಕೆ ತಲುಪಲಿದೆ. ಶಿವಮೊಗ್ಗದಿಂದ ಬೆಂಗಳೂರು ಮಾರ್ಗವಾಗಿ ರೈಲು ಚೆನ್ನೈ ತಲುಪಲಿದೆ ಎಂದು ಹೇಳಿದರು.
ಶಿವಮೊಗ್ಗ- ರೇಣಿಗುಂಟ ರೈಲು ಪುನಾರಂಭಕ್ಕೆ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ. ಶಿವಮೊಗ್ಗ- ಬೀರೂರಿಗೆ ಡಬ್ಲಿಂಗ್ ಗೆ 1258 ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗ- ಮಂಗಳೂರಿಗೆ ಶೃಂಗೇರಿ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರು ಮೂಲಕ ಸಕಲೇಶಪುರಕ್ಕೆ ಲಿಂಕ್ ಮಾಡಬಹುದು ಎಂಬ ಪ್ರಸ್ತಾವನೆ ಇದೆ ಎಂದು ಹೇಳಿದರು.
ಕೋಟೆ ಗಂಗೂರಿನ ರೈಲ್ವೆ ಕೋಚಿಂಗ್ ಯಾರ್ಡ್ ಹಾಗೂ ಶಿವಮೊಗ್ಗ- ರಾಣೆಬೆನ್ನೂರು ಮಾರ್ಗವಾದರೆ ದೇಶದ ಎಲ್ಲಾ ರೈಲುಗಳನ್ನು ತರಲಾಗುವುದು ಎಂದರು. ಅಧಿವೇಶನದ ಸಮಯದಲ್ಲಿ ಜಿಲ್ಲೆಯ ಅನೇಕ ಯೋಜನೆಗಳ ಕುರಿತು ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿದ್ದೇನೆ. ಶರಾವತಿ ಸಂತ್ರಸ್ತರ ವಿಚಾರದ ಕುರಿತು ಸಚಿವ ಭೂಪೇಂದ್ರ ಯಾದವ್ ಅವರ ಜೊತೆ ಮಾತನಾಡಿದ್ದೇನೆ. ಅದೇ ರೀತಿ ಕುಮಾರಸ್ವಾಮಿ ಅವರನ್ನು ಭದ್ರಾವತಿಗೆ ಕರೆದುಕೊಂಡು ಬಂದು VISP ಯನ್ನು ತೋರಿಸಿದ್ದೇನೆ. ನಿರ್ಮಲಾ ಸೀತಾರಾಮನ್ ಅವರನ್ನು ಸಹ ಭೇಟಿ ಮಾಡಿ ಕಾರ್ಖಾನೆಯನ್ನು ನಷ್ಟದಿಂದ ಹೊರ ತರಬೇಕೆಂದು ವಿನಂತಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.