ಶಿವಮೊಗ್ಗ: ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿದರು.
ಪತ್ನಿ ಜಯಲಕ್ಷ್ಮೀ ಅವರಿಗೆ 15 ಲಕ್ಷ ರೂ ಸಾಲ ನೀಡಿರುವುದು, ಇಬ್ಬರ ಹೆಸರಲ್ಲೂ ಸ್ವಂತ ವಾಹನ ಇಲ್ಲದಿರುವುದು, ತಮ್ಮ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗದಿರುವ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಈಶ್ವರಪ್ಪ ಬಳಿ 25 ಲಕ್ಷ ರೂ., ಪತ್ನಿ ಜಯಲಕ್ಷ್ಮೀ ಬಳಿ 2 ಲಕ್ಷ ರೂ ನಗದು ಇದೆ. ಕೆಎಸ್‌ಸಿಎ ಬ್ಯಾಂಕ್‌ನ ಶಾಸಕರ ಭವನ ಶಾಖೆಯಲ್ಲಿ ಈಶ್ವರಪ್ಪ ಹೆಸರಿನಲ್ಲಿ ಎರಡು ಖಾತೆಗಳಿವೆ. ಒಂದರಲ್ಲಿ 1.38 ಲಕ್ಷ ರೂ., ಮತ್ತೊಂದು ಖಾತೆಯಲ್ಲಿ 1,699 ರೂ. ಠೇವಣಿ ಇದೆ. ಬ್ಯಾಂಕ್ ಆಫ್ ಬರೋಡಾದ ಶಿವಮೊಗ್ಗ ಶಾಖೆಯಲ್ಲಿ ಎರಡು ಖಾತೆ ಇದೆ. ಒಂದರಲ್ಲಿ 5.45 ಲಕ್ಷ ರೂ. ಮತ್ತೊಂದರಲ್ಲಿ 1 ಲಕ್ಷ ರೂ. ಹಣ ಇದೆ. ಪತ್ನಿ ಜಯಲಕ್ಷ್ಮೀ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಇದ್ದು, 77 ಸಾವಿರ ರೂ. ಇದೆ.
ವಿವಿಧ ಸಂಸ್ಥೆಗಳಲ್ಲಿ ಈಶ್ವರಪ್ಪ ಹೂಡಿಕೆ:ಈಶ್ವರಪ್ಪ ಬೆಂಗಳೂರಿನ ವಿಶ್ವ ವಿನಾಯಕ ಬಿಲ್ಡ್ ಟೆಕ್‌ನಲ್ಲಿ 9 ಲಕ್ಷ ರೂ, ಪ್ರೊಫೆಷನಲ್ ಗ್ಲೋಬಲ್ ಇನ್‌ಫ್ರಾನಲ್ಲಿ 40 ಲಕ್ಷ ರೂ., ಪಾಲುದಾರಿಕೆ ಸಂಸ್ಥೆ ಮೈಸೂರಿನ ವರ್ಸೋಕೆಮ್‌ನಲ್ಲಿ 1.50 ಲಕ್ಷ ರೂ, ಶಿವಮೊಗ್ಗದ ಉಡುಪು ಫ್ಯಾಷನ್ಸ್ನಲ್ಲಿ 20 ಲಕ್ಷ ರೂ, ಶಿವಮೊಗ್ಗದ ಮಾರಿಕಾಂಬ ಮೈಕ್ರೋ ಫೈನಾನ್ಸ್‌ನಲ್ಲಿ 15 ಲಕ್ಷ ರೂ, ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘದಲ್ಲಿ 50 ಸಾವಿರ ರೂ, ಬೆಂಗಳೂರಿನ ರೆಟ್ರಾ ಲೈಫ್ ಸೈನ್ಸಸ್‌ನಲ್ಲಿ 9 ಲಕ್ಷ ರೂ, ಶಿವಮೊಗ್ಗದ ಮೆಟ್ರೋ ಹೆಲ್ತ್ ಕೇರ್‌ನಲ್ಲಿ 55 ಲಕ್ಷ ರೂ ಹಾಗೂ ಆರ್ 3 ಎಸ್ ಬಿಸ್ನೆಸ್ ಪಾರ್ಕ್‌ನಲ್ಲಿ 10 ಲಕ್ಷ ರೂ, ಸತ್ಯಧರ್ಮ ಪ್ರಕಾಶನದಲ್ಲಿ 1.25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಪತ್ನಿ ಜಯಲಕ್ಷ್ಮೀ ಪಾಲುದಾರರಾಗಿರುವ ಜಾಮ್ ಪೈಪ್ಸ್‌ನಲ್ಲಿ 44.42 ಲಕ್ಷ ರೂ ಪಾಲುದಾರಿಕೆ ಮಾಡಿಕೊಂಡಿದ್ದಾರೆ.
ಪತ್ನಿಗೆ ಸಾಲ ನೀಡಿದ ಈಶ್ವರಪ್ಪ:ತಮ್ಮ ಪತ್ನಿ ಜಯಲಕ್ಷ್ಮೀ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಈಶ್ವರಪ್ಪ ಸಾಲ ನೀಡಿದ್ದಾರೆ. ಬೆಂಗಳೂರಿನ ಭಾರತ್ ಇಂಡಸ್ಟ್ರೀಸ್‌ಗೆ 65.15 ಲಕ್ಷ ರೂ, ಶಿವಮೊಗ್ಗದ ಮಾಚೇನಹಳ್ಳಿಯ ಜಯಲಕ್ಷ್ಮಿ ಫ್ಯೂಯಲ್ಸ್‌ಗೆ 16.50 ಲಕ್ಷ ರೂ ಸಾಲ ನೀಡಿದ್ದಾರೆ. ಮಲ್ಲೇಶ್ವರ ಎಂಟರ್‌ಪ್ರೈಸೆಸ್‌ನಲ್ಲಿ 1.84 ಲಕ್ಷ ರೂಗಳನ್ನು ಹಾಗೂ ಪತ್ನಿ ಜಯಲಕ್ಷ್ಮಿ ಅವರಿಗೆ 15.78 ಲಕ್ಷ ರೂ. ಸಾಲ ನೀಡಿದ್ದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈಶ್ವರಪ್ಪ ಅವರು 5.87 ಕೋಟಿ ರೂ. ಸಾಲ ಮಾಡಿರುವುದಾಗಿ ತೋರಿಸಿಕೊಂಡಿದ್ದಾರೆ. ಅಲ್ಲದೆ, ಪತ್ನಿ ಜಯಲಕ್ಷ್ಮೀ ಅವರಿಗೆ 70.80 ಲಕ್ಷ ರೂ ಸಾಲವಿದೆ.