ಕಾರವಾರ (ಉತ್ತರ ಕನ್ನಡ): ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದವರಿಗಾಗಿ ಹಾಗೂ ಬೆಂಜ್ ಲಾರಿ ಪತ್ತೆಗೆ ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ಹಾಗೂ ಹೆಲಿಕಾಪ್ಟರ್ ಮೂಲಕ ಗುರುವಾರ ಹುಡುಕಾಟ ಆರಂಭವಾಗಿದೆ. ಶಿರೂರು ಗುಡ್ಡ ಕುಸಿತ ಪ್ರದೇಶದ ಬಳಿ ಗಂಗಾವಳಿ ನದಿಯಲ್ಲಿ ಹಾಗೂ ಬೆಂಜ್ ಲಾರಿ ಲೊಕೇಶನ್ ಪತ್ತೆಯಾದ ಪ್ರದೇಶದಲ್ಲಿ ಹುಡುಕಾಟ ಮುಂದುವರಿಸಲಾಗಿದೆ.
ದಡದಿಂದ ಲಾಂಗ್ ಆರ್ಮ್ ಬೂಮರ್ ಯಂತ್ರದ ಮೂಲಕ ನಿರಂತರವಾಗಿ ಡ್ರೆಜ್ಜಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ನಡುವೆ ನೌಕಾನೆಲೆಯ ಹೆಲಿಕಾಪ್ಟರ್ ಮೂಲಕ ಗಂಗಾವಳಿ ನದಿ ಪ್ರದೇಶದಲ್ಲಿ ಮೃತಪಟ್ಟವರಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಇದಲ್ಲದೆ ಲಾರಿ ಹಾಗೂ ನಾಪತ್ತೆಯಾದವರಿಗಾಗಿ ದೇಹಲಿಯಿಂದ ಆಗಮಿಸಿದ ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ನಿಂದಲೂ ನದಿ ಹಾಗೂ ನದಿ ತೀರದಲ್ಲಿ ಹುಡುಕಾಟ ಆರಂಭಗೊಂಡಿದೆ.
ಡ್ರೋನ್ ವಿಶೇಷತೆ ಏನು?: ಈ ಡ್ರೋನ್ ಸಾಧಾರಣ ಸಾಧನವಲ್ಲ. 2.4 ಕಿ.ಮೀ ಎತ್ತರದಲ್ಲಿ ಹಾರಾಟ ನಡೆಸಬಹುದಾದ, ಮಣ್ಣಿನಲ್ಲಿ 20 ಮೀಟರ್ ಮತ್ತು ನೀರಿನಲ್ಲಿ 70 ಮೀಟರ್ ಆಳದಲ್ಲೂ ಪರೀಕ್ಷೆ ನಡೆಸಬಲ್ಲ ಡ್ರೋನ್ ಆಗಿದೆ. ಹಿಮ, ನೀರು, ಬಂಡೆ ಮತ್ತು ಮರುಭೂಮಿಗಳಲ್ಲಿ ಪತ್ತೆ ಕಾರ್ಯಕ್ಕೆ ಈ ಡ್ರೋನ್ ಬಳಕೆಯಾಗುತ್ತದೆ. ಈ ಸಾಧನವನ್ನು ಇಬ್ಬರು ತರಬೇತಿ ಪಡೆದ ಸೈನಿಕರು ನಿರ್ವಹಿಸುತ್ತಾರೆ. ಭಾರೀ ಪ್ರವಾಹಗಳು ಮತ್ತು ಹಿಮಕುಸಿತಗಳು ಸಂಭವಿಸಿದ ಸ್ಥಳಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ.