'ಭಗೀರಥ ಮಹಿಳೆ' ಗೌರಿಗೆ ಬಾವಿ ತೋಡಲು ಸಿಕ್ತು ಅನುಮತಿ: ಪ್ರತಿಕ್ರಿಯೆಗಳು ಶಿರಸಿ(ಉತ್ತರ ಕನ್ನಡ):ಅಂಗನವಾಡಿ ಮಕ್ಕಳಿಗೆ ನೀರು ಪೂರೈಸಲು ಬಾವಿ ತೊಡಲು ಮುಂದಾಗಿದ್ದ ಗೌರಿ ಎಂಬವರ ಸಮಾಜಮುಖಿ ಕೆಲಸಕ್ಕೆ ಎದುರಾದ ಅಡೆತಡೆ ನಿವಾರಣೆ ಆಗಿದೆ. ಶಾಸಕ ಭೀಮಣ್ಣ ನಾಯ್ಕ ಹಾಗೂ ಇತರ ಗಣ್ಯರ ಸಹಕಾರದಿಂದ ಬಾವಿ ತೆಗೆಯಲು ಇಲಾಖೆ ಅನುಮತಿ ನೀಡಿದ್ದು, ಕಳೆದ ಎರಡು ದಿನದಿಂದ ನಡೆಯುತ್ತಿದ್ದ ಗೊಂದಲ ಬಗೆಹರಿಯಿತು.
'ಭಗೀರಥ ಮಹಿಳೆ' ಎಂದೇ ಖ್ಯಾತರಾಗಿದ್ದ ಶಿರಸಿಯ ಗಣೇಶ ನಗರದ ಗೌರಿ ನಾಯ್ಕ ಅವರು ತಮ್ಮ ಮನೆ ಸಮೀಪದಲ್ಲೇ ಇದ್ದ ಅಂಗನವಾಡಿ ಮಕ್ಕಳಿಗಾಗಿ ಬಾವಿ ತೆಗೆಯಲು ಮುಂದಾಗಿದ್ದರು. 12 ಅಡಿ ಬಾವಿಯನ್ನು ಈಗಾಗಲೇ ತೋಡಿದ್ದರು. ಆದರೆ ಅನುಮತಿ ವಿಚಾರ ಮತ್ತು ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾವಿ ತೋಡದಂತೆ ಸೂಚನೆ ನೀಡಿದ್ದರು.
ಇದರಿಂದ ಸ್ಥಳೀಯರು ರೊಚ್ಚಿಗೆದ್ದಿದ್ದು, ಸೋಮವಾರ ಅಂಗನವಾಡಿಗೆ ನೋಟಿಸ್ ನೀಡಲು ಬಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ, ಬೆಳಗ್ಗೆಯಿಂದ ಸಂಜೆಯವರೆಗೆ ಪ್ರಹಸನವೇ ನಡೆಯಿತು. ಈ ಘಟನೆಗಳಿಗೆ ಸ್ಥಳೀಯ ಗ್ರಾ.ಪಂ. ಸದಸ್ಯರು, ಸಾರ್ವಜನಿಕರು ಸಾಕ್ಷಿಯಾದರು. ಅಂತಿಮವಾಗಿ ಶಾಸಕ ಭೀಮಣ್ಣ ನಾಯ್ಕ ಬಾವಿ ತೋಡಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳು ಬಾವಿ ತೆಗೆಯಬಹುದು ಎಂದು ಗೌರಿ ನಾಯ್ಕಗೆ ಮೌಖಿಕವಾಗಿ ತಿಳಿಸಿದರು. ಇದರಿಂದ ಮಕ್ಕಳಿಗೆ ನೀರಿನ ಭಾಗ್ಯ ದೊರೆಯುವಂತಾಯಿತು.
ಸೋಮವಾರ ಒಂದೇ ದಿನ ಅಂಗನವಾಡಿಗೆ ಕಂದಾಯ ಇಲಾಖೆ, ತಾಲೂಕು ಪಂಚಾಯತ್, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು. ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಅಂಗನವಾಡಿ ಹುತ್ಗಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು, ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ನಾಯ್ಕ, ಸದಸ್ಯ ರಾಜು ಮುಕ್ರಿ ಹಾಗೂ ಸ್ಥಳೀಯರು ಸ್ಥಳದಲ್ಲೇ ಇದ್ದು, ಬಾವಿ ತೋಡಲು ಅವಕಾಶ ನೀಡಲು ಸಹಕರಿಸಿದರು. ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಭೇಟಿ ನೀಡಿ ಸಹಕಾರ ನೀಡುವ ಭರವಸೆ ಕೊಟ್ಟರು.
ಅಂಗನವಾಡಿಗೆ ಬಾವಿ ತೊಡಲು ನಿರಾಕರಿಸಿದ್ದ ಪ್ರಕರಣ ಬೆಳಕಿಗೆ ಬಂದ ಬಳಿಕ ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಿ, ಅಂಗನವಾಡಿ ಅಭಿವೃದ್ಧಿಗೆ ಸಹಾಯ ನೀಡುವುದಾಗಿ ತಿಳಿಸಿದರು. ಗೌರಿ ನಾಯ್ಕ ತೋಡಿದ ಬಾವಿಗೆ ರಿಂಗ್ ಅಳವಡಿಕೆ ಹಾಗೂ ಕಟ್ಟೆ ನಿರ್ಮಾಣ, ಅಂಗನವಾಡಿಗೆ ಕಾಂಪೌಂಡ್ ಹಾಗೂ ಪಂಪ್, ನೀರಿನ ಟ್ಯಾಂಕ್ ನಿರ್ಮಾಣ ಮಾಡಿಕೊಡುವುದಾಗಿ ಸ್ಥಳದಲ್ಲೇ ಘೋಷಿಸಿದರು. ಅಂತಿಮವಾಗಿ ಸಮಸ್ಯೆ ಬಗೆಹರಿಯಿತು.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಗೌರಿ ನಾಯ್ಕ ಮಾತನಾಡಿ, ''ನಾನು ಈ ಬಾವಿಯನ್ನು ತೋಡುವಾಗ ನಿಲ್ಲಿಸುವಂತೆ ಹೇಳಿದರು. ಆಗ ನನಗೆ ತುಂಬಾ ಬೇಸರವಾಯಿತು. ನಾನು ದುಡ್ಡಿನ ಆಸೆಗಾಗಿ ಬಾವಿ ತೆಗೆಯುತ್ತಿರುವುದಲ್ಲ. ಈಗಾಗಲೇ ಎರಡು ಬಾವಿ ತೆಗೆದಿದ್ದೇನೆ. ನನಗೆ ಯಾವುದೇ ಪಕ್ಷ ಅಂತಿಲ್ಲ. ಎಲ್ಲರೂ ನನ್ನನ್ನು ಪ್ರೀತಿಯಿಂದ ಕರೆದು ಸನ್ಮಾನ ಮಾಡಿದ್ದಾರೆ. ಹಾಗಾಗಿ ನಾನು ಋಣ ತೀರಿಸಬೇಕು, ಮಕ್ಕಳಿಗೆ ನೀರು ಆಗುತ್ತೆ ಎನ್ನುವ ಕಾರಣಕ್ಕೆ ಈ ಬಾವಿ ಕೆಲಸಕ್ಕೆ ಬಂದೆ. ಇದನ್ನು ನನ್ನ ಮನೆಗಾಗಿ ಮಾಡಿಕೊಂಡಿಲ್ಲ. ಶಾಲೆಯ ಮಕ್ಕಳಿಗೆ ಅನುಕೂಲ ಆಗಲಿ ಎಂದು ಮಾಡಲು ಬಂದೆ. ಇನ್ನು ನಾಲ್ಕು ದಿನದಲ್ಲಿ ಅಲ್ಲಿ ನೀರು ಬರುತ್ತೆ. ಅಧಿಕಾರಿಗಳು ನನಗೆ ಇದನ್ನು ಮಾಡಲು ಅವಕಾಶ ಮಾಡಿಕೊಡಬೇಕು. ಕೆಲಸಕ್ಕೆ ಅಡ್ಡಿ ಮಾಡಬಾರದು'' ಎಂದರು.
ಇದನ್ನೂ ಓದಿ:ಮಳೆಯಿಲ್ಲದೇ ಬತ್ತಿದ ಕೆರೆಗೆ ಕೊಳವೆ ಬಾವಿಯಿಂದ ನೀರು ಹರಿಸಿ ಪ್ರಾಣಿಪಕ್ಷಿಗಳ ನೀರಿನ ದಾಹ ತೀರಿಸುತ್ತಿರುವ ರೈತ