ಕರ್ನಾಟಕ

karnataka

ETV Bharat / state

ಶಿಗ್ಗಾಂವಿ ಕಾಂಗ್ರೆಸ್‌ನಲ್ಲಿ ಬಂಡಾಯ: ಕೊನೇ ಕ್ಷಣದಲ್ಲಿ ಓಡಿ ಬಂದು ನಾಮಪತ್ರ ಸಲ್ಲಿಸಿದ ಅಜ್ಜಂಪೀರ್ ಖಾದ್ರಿ

ಒಂದೆಡೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ್ ಶಿಗ್ಗಾಂವಿ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸಿದರೆ, ಕೊನೇ ಕ್ಷಣದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ​ ಅಜ್ಜಂಪೀರ ಖಾದ್ರಿ ಕೂಡ ನಾಮಪತ್ರ ಸಲ್ಲಿಸಿ, ಬಂಡಾಯದ ಬಾವುಟ ಹಾರಿಸಿದರು.

Congress candidate Yasir Khan Pathan submits nomination
(ಎಡದಿಂದ) ನಾಮಪತ್ರ ಸಲ್ಲಿಸಲು ಬೈಕ್​ನಲ್ಲಿ ಬಂದ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಅಜ್ಜಂಫೀರ್ ಖಾದ್ರಿ; ನಾಮಪತ್ರ ಸಲ್ಲಿಸಿದ ಕಾಂಗ್ರೆಸ್​ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ (ETV Bharat)

By ETV Bharat Karnataka Team

Published : Oct 25, 2024, 2:56 PM IST

Updated : Oct 25, 2024, 5:56 PM IST

ಹಾವೇರಿ: ತಮ್ಮ ಬೆಂಬಲಿಗರೊಂದಿಗೆ ಶಿಗ್ಗಾಂವಿ ತಹಶೀಲ್ದಾರ್​ ಕಚೇರಿಗೆ ಆಗಮಿಸಿದ ಕಾಂಗ್ರೆಸ್​ ಅಭ್ಯರ್ಥಿ ಯಾಸೀರ್​ ಖಾನ್​ ಪಠಾಣ್​ ಅವರು ಚುನಾವಣಾಧಿಕಾರಿ ಮಹ್ಮದ್ ಖಿಝರ್​ ಅವರಿಗೆ ಇಂದು ತಮ್ಮ ನಾಮಪತ್ರ ಸಲ್ಲಿಸಿದರು.

ಇನ್ನೊಂದೆಡೆ, ಬೈಕ್​ನಲ್ಲಿ ಬಂದು ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಅಜ್ಜಂಫೀರ್ ಖಾದ್ರಿ ಕೂಡ ನಾಮಪತ್ರ ಸಲ್ಲಿಸಿ ಗಮನ ಸೆಳೆದರು. ಕೊನೆಯ 13 ನಿಮಿಷ ಬಾಕಿ ಇರುವಾಗ ಬೈಕ್‌ನಲ್ಲಿ ಬಂದ ಅವರು, ನಂತರ ಚುನಾವಣಾಧಿಕಾರಿ ಕಚೇರಿ ಓಡಿ ಬರುವಾಗ ಬಿದ್ದು ಎದ್ದು ನಾಮಪತ್ರ ಸಲ್ಲಿಸಿದರು. ಇದರಿಂದಾಗಿ ಶಿಗ್ಗಾಂವಿ ಕಾಂಗ್ರೆಸ್​ಗೆ ಬಂಡಾಯದ ಬಿಸಿ ತಟ್ಟಿದೆ.

ಶಿಗ್ಗಾಂವಿ ಕಾಂಗ್ರೆಸ್‌ನಲ್ಲಿ ಬಂಡಾಯ (ETV Bharat)

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಯಾಸೀರ್​ ಖಾನ್​ ಪಠಾಣ್​, "ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾವು ಎಲ್ಲರೂ ಈ ಮೊದಲೇ ಜನತಾ ನ್ಯಾಯಾಲಯದಲ್ಲಿ ಪ್ರಮಾಣ ಮಾಡಿದ್ದೇವೆ.‌ ಯಾರಿಗೇ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದೇವೆ. ಕಾಂಗ್ರೆಸ್ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಒಲವಿದೆ. ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಕ್ಷೇತ್ರ ಸುತ್ತಾಡಿದ್ದೇನೆ. ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್ ನೀಡಿದೆ. ಅಲ್ಪಸಂಖ್ಯಾತರ ಸಮಾಜಕ್ಕೆ ಟಿಕೆಟ್ ನೀಡಲಾಗಿದೆ" ಎಂದರು.

ಮಾಜಿ ಶಾಸಕ ಟಿಕೆಟ್ ಅಕಾಂಕ್ಷಿ ಅಜ್ಜಂಪೀರ ಖಾದ್ರಿ ಅವರ ಅಸಮಾಧಾನದ ಕುರಿತು ಮಾತನಾಡಿ, "ಅವರು ಹಿರಿಯರು. ಅವರು ಯಾವ ವಿಚಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ಮೇಲೆ ಯಾವುದೇ ಕೇಸ್ ಇಲ್ಲ. ನಮ್ಮ ರಾಜ್ಯ ನಾಯಕರು ಅವರ ಜೊತೆಗೆ ಮಾತನಾಡುತ್ತಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ನಮ್ಮ‌ಪಕ್ಷದ ಹಿರಿಯರು ಮತ್ತು ಕ್ಷೇತ್ರದ ಜನರಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು" ಎಂದರು.

ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಜ್ಜಂಫೀರ್ ಖಾದ್ರಿ, "ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದಷ್ಟೇ ನನ್ನ ಗುರಿ. ತಾಲೂಕಿನ ಮಗ ನಾನು. ಈ‌ ತಾಲೂಕಿನ ಜನರ ಜೊತೆ ಇದ್ದೇನೆ. ಯಾರೂ ಮನವೊಲಿಕೆಗೆ ಪ್ರಯತ್ನಿಸಿಲ್ಲ. ಜಮೀರ್ ನಮ್ಮ ದರ್ಗಾಕ್ಕೆ ನಮಾಜ್​ಗೆ ಬಂದಿದ್ರು. ನಾನು‌ ನಮಾಜ್ ಮಾಡಿ ಗೆಲುವಿಗೆ ಬೇಡಿಕೊಂಡಿದ್ದೇನೆ. ಪಠಾಣ್ ಹಾನಗಲ್​ನವನು, ಭರತ್ ಹುಬ್ಬಳ್ಳಿಯವನು. ಜನ‌ ಇವರನ್ನು ತಿರಸ್ಕರಿಸುತ್ತಾರೆ" ಎಂದರು.

ಮತ್ತೊಂದು ಬಂಡಾಯ: ಅಜ್ಜಂಫೀರ್​ ಖಾದ್ರಿ ಬಳಿಕ ಮಾಜಿ ಶಾಸಕ ಮಂಜುನಾಥ ಕುನ್ನೂರು ಸಹ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ತಮ್ಮ ಮಗ ರಾಜು ಕುನ್ನೂರುಗೆ ಕೈ ಟಿಕೆಟ್​ ಕೇಳಿದ್ದ ಮಂಜುನಾಥ್​ ಇದೀಗ ಟಿಕೆಟ್​ ನಿರಾಕರಣೆ ಹಿನ್ನೆಲೆಯಲ್ಲಿ ತಾವೇ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಚನ್ನಪಟ್ಟಣ ಉಪಚುನಾವಣೆ: ಶಕ್ತಿ ಪ್ರದರ್ಶನದ ಮೂಲಕದ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

Last Updated : Oct 25, 2024, 5:56 PM IST

ABOUT THE AUTHOR

...view details