ಹಾವೇರಿ:ಶಿಗ್ಗಾಂವಿವಿಧಾನಸಭಾ ಕ್ಷೇತ್ರದಉಪಕದನ ಅಭ್ಯರ್ಥಿಗಳ ಭವಿಷ್ಯ ಮಾತ್ರವಲ್ಲ, ಅವರ ಅಸ್ತಿತ್ವವನ್ನೂ ಉಳಿಸುವ ಕಣವಾಗಿ ಮಾರ್ಪಟ್ಟಿದೆ. ರಾಜ್ಯದ ಮೂರು ಕ್ಷೇತ್ರಗಳ ಉಪಸಮರದಲ್ಲಿ ಶಿಗ್ಗಾಂವಿ ಕೂಡ ಒಂದು. ಇಂದು ಬೆಳಗ್ಗೆ ಮತಗಟ್ಟೆ ಸಿಬ್ಬಂದಿ ಅಧಿಕೃತ ಮತದಾನಕ್ಕೂ ಮುನ್ನ ಅಣಕು ಮತದಾನ ನಡೆಸಿ, ಸಿದ್ಧತೆಯನ್ನು ಪರಿಶೀಲಿಸಿದರು.
ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಲಿರುವ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.
ಯಾರು, ಎಲ್ಲಿ ವೋಟಿಂಗ್?: ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ತಮ್ಮ ತಂದೆ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಹೋದರಿ ಅಧಿತಿ ಬೊಮ್ಮಾಯಿ ಜೊತೆ ಆಗಮಿಸಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 102ರಲ್ಲಿ ಮತದಾನ ಮಾಡಲಿದ್ದಾರೆ.
ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಕೂಡಾ ಕುಟುಂಬ ಸಮೇತರಾಗಿ ಬಂದು ಪಟ್ಟಣದ ಮಾಮಲೇ ದೇಸಾಯಿ ಶಾಲೆಯ ಮತಗಟ್ಟೆ 104ರಲ್ಲಿ ಮತದಾನ ಮಾಡಲಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಅಜ್ಜಂಪೀರ್ ಖಾದ್ರಿ ಶಿಗ್ಗಾಂವಿ ತಾಲೂಕು ಹುಲಗೂರು ಗ್ರಾಮದಲ್ಲಿ ಮತದಾನ ಮಾಡಲಿದ್ದಾರೆ. ಹುಲಗೂರು ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 31 ರಲ್ಲಿ ಖಾದ್ರಿ ಮತದಾನ ಮಾಡಲಿದ್ದಾರೆ.
ಕೈ ಅಭ್ಯರ್ಥಿ ವಿರುದ್ಧ ದೂರು: ಮತದಾನಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಯಾಸೀರ್ ಖಾನ್ ಪಠಾಣ್ ರೌಡಿಶೀಟ್ ಪ್ರಕರಣ ಇದ್ದು, ಆದರೆ ಅವರು ನಾಮಪತ್ರದ ಅಫಡವಿಟ್ನಲ್ಲಿ ತಮ್ಮ ವಿರುದ್ಧ ಯಾವುದೇ ಕೇಸ್ಗಳಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಚುನಾವಣಾ ಏಜೆಂಟ್, ನ್ಯಾಯವಾದಿಯೂ ಆಗಿರುವ ಎಸ್.ಕೆ.ಅಕ್ಕಿ ಅವರು ಇ-ಮೇಲ್ ಮೂಲಕ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.
ಮತದಾರರ ಮಾಹಿತಿ:ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,37,525. ಈ ಪೈಕಿ 1,21,443 ಪುರುಷರು ಮತ್ತು 1,16,076 ಮಹಿಳೆಯರು ಹಾಗೂ ಇತರ 6 ಮತದಾರರಿದ್ದಾರೆ. ಒಟ್ಟು 241 ಮತಗಟ್ಟೆಗಳಿದ್ದು, 92 ಸೂಕ್ಷ್ಮ ಮತ್ತು 141 ಸಾಮಾನ್ಯ ಮತಟ್ಟೆಗಳಿವೆ.
ಮತಗಟ್ಟೆಗಳ ಸಂಖ್ಯೆ: ಕ್ಷೇತ್ರದ ಒಟ್ಟು ಮತಗಟ್ಟೆಗಳ ಸಂಖ್ಯೆ 241, ಈ ಪೈಕಿ 92 ಸೂಕ್ಷ್ಮ ಮತಗಟ್ಟೆಗಳು 141 ಸಾಮಾನ್ಯ ಮತಟ್ಟೆಗಳೆಂದು ಗುರುತಿಸಲಾಗಿದೆ.
ಭದ್ರತೆಯ ವಿವರ:ಉಪ ಚುನಾವಣೆ ಹಿನ್ನೆಲೆಯಲ್ಲಿಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು,ಎಸ್ಪಿ, ಎಎಸ್ಪಿ, 4 ಡಿವೈಎಸ್ಪಿ, 12 ಸಿಪಿಐ, 24 ಪಿಎಸ್ಐ, 68 ಎಎಸ್ಐ, ಸೇರಿ 716 ಪೊಲೀಸ್ ಸಿಬ್ಬಂದಿ ಜೊತೆಗೆ 4 ಕೆಎಸ್ಆರ್ಪಿ ಮತ್ತು ಡಿಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.