ಬೆಂಗಳೂರು:ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದ ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆ ಸಂಬಂಧಿಸಿದಂತೆ ಹೊರಡಿಸಿರುವ ಟೆಂಡರ್‌ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ.
ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಲಾರ್ಸೆನ್ ಅಂಡ್ ಟುಬ್ರೋ (ಎಲ್ ಅಂಡ್ ಟಿ) ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು, ತುರ್ತು ವಿಚಾರಣೆ ನಡೆಸಲು ಮಾಡಿದ ಮನವಿ ಮೇರೆಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ಟೆಂಡರ್‌ನ ಲೆಟರ್ ಆಫ್ ಅವಾರ್ಡ್ ಅಮಾನತ್ತಿನಲ್ಲಿಡಲು ಪ್ರತಿವಾದಿ ಕೆಪಿಸಿಎಲ್‌ಗೆ ಸೂಚನೆ ನೀಡಿತು.
ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ಪ್ರತಿ ಇನ್ನೂ ಲಭ್ಯವಾಗದ ಹಿನ್ನೆಲೆಯಲ್ಲಿ ಗುತ್ತಿಗೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳಲು ವಿಭಾಗೀಯಪೀಠ ಆದೇಶಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರ ಎಲ್ ಅಂಡ್ ಟಿ ಸಂಸ್ಥೆ ಪರ ವಾದಿಸಿದ ಹಿರಿಯ ನ್ಯಾಯವಾದಿ ಉದಯ್ ಹೊಳ್ಳ, ಪಾರದರ್ಶಕ ಕಾಯಿದೆಯ ಪ್ರಕಾರ ಟೆಂಡರ್ಗೆ 30 ದಿನಗಳ ಕಾಲಾವಕಾಶ ನೀಡಬೇಕು. ಆದರೆ, ಅದಕ್ಕೆ ವಿರುದ್ಧವಾಗಿ ಕೇವಲ 21 ದಿನಗಳ ಟೆಂಡರ್ ನೀಡಲಾಗುತ್ತಿದೆ. ಕೆಪಿಸಿಎಲ್ನಿಂದ ಕೆಲ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ನೀಡಲಾಗುತ್ತಿದೆ ಎಂದು ಹೇಳಿದರು.
ಅಲ್ಲದೆ, 5 ವರ್ಷ ಯೋಜನಾ ಅವಧಿಯ ಸುಮಾರು 8,000 ಕೋಟಿ ಮೊತ್ತದ ಬೃಹತ್ ಯೋಜನೆಗೆ ಕೇವಲ 21 ದಿನಗಳ ಟೆಂಡರ್ ಅಖೈರುಗೊಳಿಸಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯಿಂದ ಪಾರಾಗಲು ತರಾತುರಿಯ ಟೆಂಡರ್ ಆಖೈರುಗೊಳಿಸಲಾಗುತ್ತಿದೆ. ಆದರೆ, ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿದಾರರ ಈ ವಾದವನ್ನು ತಿರಸ್ಕರಿಸಿದೆ. ಏಕಸದಸ್ಯ ಪೀಠದ ಆದೇಶದ ಪ್ರತಿಯೂ ದೊರೆತಿಲ್ಲ, ಹಾಗಾಗಿ ಮಧ್ಯಂತರ ತಡೆ ನೀಡಬೇಕು ಎಂದರು.
ಆದರೆ, ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, 30 ದಿನಗಳ ಟೆಂಡರ್ ಅವಧಿಯನ್ನು ಕಡಿತಗೊಳಿಸಲು ಪ್ರಾಧಿಕಾರಕ್ಕೆ ಅಧಿಕಾರವಿದೆ. ಈಗಾಗಲೇ ಬಿಡ್ ತೆರೆಯಲಾಗಿದ್ದು, ಲೆಟರ್‌ಆಫ್ ಅವಾರ್ಡ್ ಕೂಡ ನೀಡಲಾಗಿದೆ. ತಡೆ ನೀಡಬಾರದು ಎಂದು ಮನವಿ ಮಾಡಿದರು.
ಪ್ರಕರಣದ ಹಿನ್ನೆಲೆ:ಎಲ್ ಆಂಡ್ ಟಿ ಕಂಪನಿ ಟೆಂಡರ್ ನಿಯಮಗಳಲ್ಲಿ ಬದಲಾವಣೆ ಮಾಡಿ 30 ದಿನಗಳ ಅವಧಿಯನ್ನು 21 ದಿನಗಳಿಗೆ ಇಳಿಸಿದ ಕ್ರಮವನ್ನು ಪ್ರಶ್ನಿಸಿ ಏಕಸದಸ್ಯ ಪೀಠದ ಮೊರೆ ಹೋಗಿತ್ತು. ಆದರೆ, ಏಕಸದಸ್ಯ ಪೀಠ ಕಂಪನಿಯ ವಾದವನ್ನು ತಿರಸ್ಕರಿಸಿತಲ್ಲದೆ, ಅರ್ಜಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಅಲ್ಲದೆ, ಟೆಂಡರ್ ಕರೆಯುವ ಪ್ರಾಧಿಕಾರಕ್ಕೆ ತನ್ನ ಅಗತ್ಯಕ್ಕೆ ತಕ್ಕಂತೆ ನಿಯಮಗಳನ್ನು ಬದಲಿಸಿಕೊಳ್ಳುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಕಂಪನಿ ವಿಭಾಗೀಯ ಪೀಠದ ಮೊರೆ ಹೋಗಿದೆ.
ಇದನ್ನೂ ಓದಿ:ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ: ಕಚೇರಿಗೆ ಕಲ್ಲು ತೂರಿ, ವಾಹನಗಳಿಗೆ ಬೆಂಕಿಯಿಟ್ಟ ಬೆಳೆಗಾರರು - 144 ಸೆಕ್ಷನ್ ಜಾರಿ