ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂಡಿ ಪ್ರಿಯಾಂಗ ಎಂ, ಪ್ರತಿಕ್ರಿಯೆ (ETV Bharat) ಹುಬ್ಬಳ್ಳಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೊದಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿದೆ. ಇದರ ಮಧ್ಯೆ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಕರ್ನಾಟಕ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮರು ಪಾವತಿಸಬೇಕಾದ ಮೊತ್ತದಲ್ಲಿ ರಾಜ್ಯ ಸರ್ಕಾರ ₹298 ಕೋಟಿಗೂ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದೆ. ಇದು ಸಂಸ್ಥೆ ನಡೆಸಲು ಹೆಣಗಾಡುವ ಸ್ಥಿತಿಗೆ ಬಂದು ನಿಂತಿದೆ.
ಈವರೆಗೆ ಸರ್ಕಾರದಿಂದ ಪಾವತಿಯಾಗಿದ್ದೆಷ್ಟು; 2023ರ ಜೂನ್ 11ರಂದು ಈ ಯೋಜನೆ ಜಾರಿಗೆ ಬಂದಿತ್ತು. ಅಂದಿನಿಂದ ಇಲ್ಲಿಯವರೆಗೆ (2024ರ ಮಾರ್ಚ್ ಹೊರತುಪಡಿಸಿ) ಯಾವುದೇ ತಿಂಗಳು ಸಹ ರಾಜ್ಯ ಸರ್ಕಾರ ಪೂರ್ಣ ಮೊತ್ತವನ್ನು ಮರು ಪಾವತಿ ಮಾಡಿಲ್ಲ. ಇದರ ಪರಿಣಾಮವಾಗಿ ಬಾಕಿ 298 ಕೋಟಿ ರೂ. ಸಮೀಪ ಬಂದು ಮುಟ್ಟಿದೆ. ಯೋಜನೆ ಆರಂಭದಿಂದ ಈ ವರ್ಷದ ಏಪ್ರಿಲ್ ಅಂತ್ಯದವರೆಗೆ ಮಹಿಳೆಯರಿಗೆ 46,42,11,425 ಶೂನ್ಯ ಟಿಕೆಟ್ ವಿತರಿಸಲಾಗಿದೆ. ಇದರ ಒಟ್ಟು ಪ್ರಯಾಣ ವೆಚ್ಚ ₹1193,86,33,524 ರೂಪಾಯಿಗಳಾಗಿವೆ. ಇದರಲ್ಲಿ ರಾಜ್ಯ ಸರ್ಕಾರ, ವಾ.ಕ.ರ.ಸಾ ಸಂಸ್ಥೆಗೆ ಇಲ್ಲಿಯವರೆಗೆ ₹ 894,90,52,000 ಪಾವತಿ ಮಾಡಿದೆ.
ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ, ವಾ.ಕ.ರ.ಸಾ ಸಂಸ್ಥೆಗೆ ಮರು ಪಾವತಿಯಲ್ಲಿ ಪ್ರತಿ ತಿಂಗಳು ₹15 ರಿಂದ 40 ಕೋಟಿವರೆಗೆ ಬಾಕಿ ಉಳಿಸಿಕೊಳ್ಳುತ್ತ ಬಂದಿದೆ. ಆದರೆ, ಮಾರ್ಚ್ ತಿಂಗಳಲ್ಲಿ ಶೂನ್ಯ ಟಿಕೆಟ್ ಮೊತ್ತಕ್ಕಿಂತ ಹೆಚ್ಚಿನ ಹಣ ಮರು ಪಾವತಿ ಮಾಡಿರುವುದು ವಿಶೇಷ. ಎರಡು ಕಂತುಗಳಲ್ಲಿ 157.36 ಕೋಟಿ ರೂ. ಪಾವತಿಸಿತ್ತು.
ಇತ್ತೀಚಿನ ತಿಂಗಳಲ್ಲಿ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಏಪ್ರಿಲ್ ತಿಂಗಳು ಹೊರತುಪಡಿಸಿ ಶೂನ್ಯ ಟಿಕೆಟ್ ಮೊತ್ತದಲ್ಲೂ ಗಮನಾರ್ಹ ಏರಿಕೆ ಏನೂ ಆಗಿಲ್ಲ. ಸಮಾಧಾನಕರ ಸಂಗತಿಯೆಂದರೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳ ಮರು ಪಾವತಿ ಮೊತ್ತ ಏರಿಕೆಯಾಗಿರುವುದು. ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ 102.68 ಕೋಟಿ ರೂ. ಪಾವತಿಸಿದೆ. ಮೇ ತಿಂಗಳು ಮುಗಿಯುವ ಮೊದಲೇ 102.68 ಕೋಟಿ ರೂ. ಪಾವತಿಸಿರುವುದು ಗಮನಾರ್ಹ ಅಂಶವಾಗಿದೆ.
ಸಿಬ್ಬಂದಿ ವೇತನಕ್ಕೆ ಸಮಸ್ಯೆಯಾಗಿಲ್ಲ: ಶಕ್ತಿ ಯೋಜನೆಯಲ್ಲಿ ಪ್ರತಿ ದಿನ 14 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಅದರ ಪೈಕಿ ₹792 ಕೋಟಿ ಸರ್ಕಾರದಿಂದ ಬಿಡುಗಡೆಯಾಗಿದೆ. ಅದರಲ್ಲಿ ₹290 ಕೋಟಿಗೂ ಹೆಚ್ಚು ಬಿಡುಗಡೆ ಮಾಡುವುದು ಬಾಕಿ ಇದೆ. ಏಪ್ರಿಲ್ ಮತ್ತು ಮೇ ತಿಂಗಳಿನ ಬಾಕಿ ₹205 ಕೋಟಿ ಕೂಡ ಬಿಡುಗಡೆಯಾಗಿದೆ. ಇದರಿಂದ ಸಿಬ್ಬಂದಿ ಸಂಬಳ ಹಾಗೂ ಇಪಿಎಫ್ ಸೇರಿದಂತೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ವಾಯವ್ಯ ಕರ್ನಾಟಕ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಾಯಚೂರಲ್ಲಿ ಅಬ್ಬರದ ಮಳೆಗೆ ಧರೆಗುರುಳಿದ ಬೃಹತ್ ಬೇವಿನ ಮರ - Raichur Rain