ಬೆಂಗಳೂರು: ಶಕ್ತಿ ಯೋಜನೆ ಹೊರೆಯ ಮಧ್ಯೆ ರಾಜ್ಯದಲ್ಲಿ ರಸ್ತೆ ಸಾರಿಗೆ ನಿಗಮಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳು ಆರ್ಥಿಕವಾಗಿ ಸಂಕಷ್ಟದೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ. ಅಷ್ಟಕ್ಕೂ ಶಕ್ತಿ ಯೋಜನೆ ಜಾರಿಯಾಗುವ ಮುನ್ನ ಮತ್ತು ಬಳಿಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಲಾಭ ನಷ್ಟದ ಆರ್ಥಿಕ ಸ್ಥಿತಿಗತಿಯ ಸಮಗ್ರ ಚಿತ್ರಣ ಇಲ್ಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಪಂಚ ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಮಹತ್ವದ್ದಾಗಿದೆ. ಜೂನ್ 2023ರಿಂದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಿದೆ. ಅದಾಗಲೇ ನಷ್ಟದಿಂದ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆ ದೊಡ್ಡ ಹೊರೆಯನ್ನು ಹೊರಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಗರಿಷ್ಠ ವೆಚ್ಚದಲ್ಲಿ ಸೀಮಿತ ಆದಾಯದ ಮಧ್ಯೆ ಕಾರ್ಯನಿರ್ವಹಿಸುತ್ತಿದೆ.
ಇದೀಗ ಸರ್ಕಾರ ಹೊರೆಯನ್ನು ತಗ್ಗಿಸಲು 15% ಟಿಕೆಟ್ ದರ ಏರಿಕೆ ಮಾಡಲು ನಿರ್ಧರಿಸಿದೆ. ಇತ್ತ ಆರ್ಥಿಕ ಹೊರೆಯನ್ನು ನಿಭಾಯಿಸಲು ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ 2,000 ಕೋಟಿ ರೂ. ಸಾಲ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಆ ಮೂಲಕ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಹೊರೆ ನಿರ್ವಹಿಸಲು ರಾಜ್ಯ ಸರ್ಕಾರ ಸಾಲ ಹಾಗೂ ಟಿಕೆಟ್ ದರ ಏರಿಕೆಯ ಮೊರೆ ಹೋಗಿದೆ. ರಸ್ತೆ ಸಾರಿಗೆ ನಿಗಮಗಳ ಈ ಆರ್ಥಿಕ ಸಂಕಷ್ಟಕ್ಕೆ ಶಕ್ತಿ ಯೋಜನೆಯತ್ತ ಪ್ರತಿಪಕ್ಷಗಳು ಸೇರಿ ಹಲವರು ಬೊಟ್ಟು ಮಾಡುತ್ತಿದ್ದಾರೆ. ಅಷ್ಟಕ್ಕೂ ಶಕ್ತಿ ಯೋಜನೆ ಮುನ್ನ ಮತ್ತು ಶಕ್ತಿ ಯೋಜನೆ ಬಳಿಕ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಲಾಭ - ನಷ್ಟ, ಸಾಲ, ಆದಾಯ, ವೆಚ್ಚದ ಸಮಗ್ರ ಸ್ಥಿತಿಗತಿಯನ್ನು ಇಲ್ಲಿ ನೋಡೋಣ.
ಶಕ್ತಿ ಯೋಜನೆಯ ಸ್ಥಿತಿಗತಿ ಏನಿದೆ?:ಸರ್ಕಾರ ಜೂನ್ 11, 2023 ರಂದು ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಈವರೆಗೆ ಸುಮಾರು 363 ಕೋಟಿ ಮಹಿಳಾ ಪ್ರಯಾಣಿಕರು ನಿಗಮದ ಬಸ್ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಈವರೆಗೆ ಶಕ್ತಿ ಯೋಜನೆಗೆ ಆಗಿರುವ ವೆಚ್ಚ 8,800 ಕೋಟಿ. ಶಕ್ತಿ ಯೋಜನೆ ಜಾರಿ ಬಳಿಕ ಈವರೆಗೆ ರಸ್ತೆ ಸಾರಿಗೆ ನಿಗಮಗಳು 1,74,908 ಟ್ರಿಪ್ಗಳ ಕಾರ್ಯಾಚರಣೆ ನಡೆಸಿವೆ. ಅಂದರೆ ಯೋಜನೆ ಜಾರಿ ಮುನ್ನ 1,54,955 ಟ್ರಿಪ್ಗಳು ಕಾರ್ಯಾಚರಿಸುತ್ತಿತ್ತು. ಆ ಮೂಲಕ 19,953 ಟ್ರಿಪ್ ಗಳು ಹೆಚ್ಚಳವಾಗಿವೆ.
ಇಲ್ಲಿವರೆಗೆ ಶಕ್ತಿ ಯೋಜನೆಗೆ ಎಷ್ಟು ಹಣ ಬಿಡುಗಡೆಯಾಗಿದೆ?:ಶಕ್ತಿ ಯೋಜನೆ ಆರಂಭವಾದಾಗಿನಿಂದ ನವೆಂಬರ್ 2024 ವರೆಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಒಟ್ಟು 6,543 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಕೆಎಸ್ಆರ್ಟಿಸಿಗೆ 2,481 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು ಬಿಎಂಟಿಸಿಗೆ 1,126 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ವಾಯುವ್ಯ ಸಾರಿಗೆಗೆ 1,613 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 1,321 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಈವರೆಗೆ ಶಕ್ತಿ ಯೋಜನೆಗೆ 8,800 ಕೋಟಿ ರೂ. ವೆಚ್ಚವಾಗಿದೆ. ಈ ಪೈಕಿ 6,543 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದಂತೆ 2,257 ಕೋಟಿ ರೂ. ಬಾಕಿ ಅನುದಾನ ಬಿಡುಗಡೆ ಮಾಡಬೇಕಾಗಿದೆ. ಆ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಶಕ್ತಿ ಯೋಜನೆ ಜಾರಿ ಬಳಿಕ ಎಷ್ಟು ಬಸ್ ಖರೀದಿ?:ಶಕ್ತಿ ಯೋಜನೆ ಬಳಿಕ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ 4,304 ಹೊಸ ಬಸ್ಗಳನ್ನು ಖರೀದಿ ಮಾಡಿರುವುದಾಗಿ ಇಲಾಖೆ ಮಾಹಿತಿ ನೀಡಿದೆ. ಕೆಎಸ್ಆರ್ಟಿಸಿಗೆ ಶಕ್ತಿ ಯೋಜನೆ ಜಾರಿ ಬಳಿಕ 1,118 ಬಸ್ ಖರೀದಿ ಮಾಡಲಾಗಿದೆ. ಬಿಎಂಟಿಸಿಯಲ್ಲಿ 1,510 ಹೊಸ ಬಸ್ ಖರೀದಿಸಲಾಗಿದೆ. ವಾಯುವ್ಯ ರಸ್ತೆ ಸಾರಿಗೆ ನಿಗಮದಲ್ಲಿ 662 ಹೊಸ ಬಸ್ ಖರೀದಿ ಮಾಡಲಾಗಿದ್ದರೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 1,014 ಹೊಸ ಬಸ್ ಖರೀದಿಸಲಾಗಿದೆ ಎಂದು ನಿಗಮಗಳು ಮಾಹಿತಿ ನೀಡಿವೆ.
2025ರಲ್ಲಿ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಸುಮಾರು 1,346 ಹೊಸ ಬಸ್ಗಳನ್ನು ಖರೀದಿಸುವುದಾಗಿ ಸಾರಿಗೆ ಸಚಿವರು ಮಾಹಿತಿ ನೀಡಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಈವರೆಗೆ ರಸ್ತೆ ಸಾರಿಗೆ ಸಂಸ್ಥೆಗಳು 4,304 ಹೊಸ ಬಸ್ ಖರೀದಿ ಮಾಡಿದ್ದರೆ, 2020-21, 2022-23ರಲ್ಲಿ ಒಟ್ಟು 1,263 ಹೊಸ ಬಸ್ ಖರೀದಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಶಕ್ತಿ ಪೂರ್ವ, ನಂತರದ ಸಾರಿಗೆ ಆದಾಯ ಎಷ್ಟು?:ಇಲಾಖೆ ನೀಡಿದ ಅಂಕಿ- ಅಂಶದ ಪ್ರಕಾರ ಶಕ್ತಿ ಯೋಜನೆ ಜಾರಿಯಾದ ಬಳಿಕ 2023-24ರಲ್ಲಿ ರಸ್ತೆ ಸಾರಿಗೆ ನಿಗಮಗಳು ಒಟ್ಟು 10,147 ಕೋಟಿ ರೂ. ಸಾರಿಗೆ ಆದಾಯ ಗಳಿಸಿದೆ. 2019-20ರಲ್ಲಿ 8,172 ಕೋಟಿ ಸಾರಿಗೆ ಆದಾಯ ಇತ್ತು. 2020-21ರಲ್ಲಿ ಕೋವಿಡ್ ಹಿನ್ನೆಲೆ ಆದಾಯ 4,013 ಕೋಟಿ ರೂ.ಗೆ ಇಳಿಕೆಯಾಯಿತು. 2021-22ರಲ್ಲಿ ಆದಾಯ 5,197 ಕೋಟಿ ರೂ.ಗೆ ಏರಿಕೆಯಾಯಿತು. 2022-23ರಲ್ಲಿ ಸಾರಿಗೆ ಆದಾಯ 8,399 ಕೋಟಿ ರೂ.ಗೆ ದ್ವಿಗುಣವಾಯಿತು. ಶಕ್ತಿ ಯೋಜನೆ ಜಾರಿ ಮುನ್ನ ಪ್ರತಿ ದಿನದ ಸಾರಿಗೆ ಆದಾಯ 23.01 ಕೋಟಿ ರೂ. ಇತ್ತು. ಜಾರಿ ಬಳಿಕ ಸಾರಿಗೆ ಆದಾಯ 32.56 ಕೋಟಿಗೆ ಏರಿಕೆಯಾಗಿದೆ. ಇತ್ತ ಪ್ರಯಾಣಿಕರ ಸಂಖ್ಯೆಯೂ 116.29 ಲಕ್ಷದಷ್ಟು ಹೆಚ್ಚಳವಾಗಿದೆ. ಶಕ್ತಿ ಯೋಜನೆ ಮುನ್ನ ನಿತ್ಯ 85.84 ಲಕ್ಷ ಪ್ರಯಾಣಿಕರು ಪ್ರಯಾಣಿಸಿದರೆ, ಶಕ್ತಿ ಜಾರಿ ನಂತರ ನಿತ್ಯ 108.90 ಲಕ್ಷಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ ಎಂದು ಅಂಕಿ - ಅಂಶ ನೀಡಿದೆ.
ಸಾರಿಗೆ ನಿಗಮಗಳ ಮೇಲಿನ ಸಾಲ, ಹೊರೆ ಎಷ್ಟು?:ನಾಲ್ಕು ಸಾರಿಗೆ ನಿಗಮಗಳ ಮೇಲೆ ಜುಲೈ 2024ರವರೆಗೆ ಸುಮಾರು 5,614 ಕೋಟಿ ಹೊರೆ ಇದೆ. ಇದರಲ್ಲಿ ಸಾಲವೂ ಒಳಗೊಂಡಿದೆ. ಭವಿಷ್ಯ ನಿಧಿ ಬಾಕಿ, ವೇತನ ಬಾಕಿ, ಇಂಧನ ವೆಚ್ಚ ಬಾಕಿ, ಇತರೆ ಬಾಕಿ ಬಿಲ್ ಸೇರಿ ಹೊಣೆಗಾರಿಕೆ ಗಗನಕ್ಕೇರಿದೆ. ಕೆಎಸ್ಆರ್ಟಿಸಿಯ ಮೇಲೆ 1,579 ಕೋಟಿ, ಬಿಎಂಟಿಸಿ ಮೇಲೆ 1,978 ಕೋಟಿ, ವಾಯುವ್ಯ ರಸ್ತೆ ಸಾರಿಗೆ ಮೇಲೆ 1,507 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ನಿಗಮದ ಮೇಲೆ 549 ಕೋಟಿ ರೂ. ಹೊಣೆಗಾರಿಕೆ ಇದೆ.
ನಾಲ್ಕು ಸಾರಿಗೆ ನಿಗಮಗಳ ಮೇಲೆ ಒಟ್ಟು 900 ಕೋಟಿ ರೂ. ಬ್ಯಾಂಕ್ ಸಾಲದ ಹೊರೆ ಇದೆ. ಈ ಪೈಕಿ ಕೆಎಸ್ಆರ್ಟಿಸಿ ಮೇಲೆ 305 ಕೋಟಿ ಸಾಲ ಇದ್ದರೆ, ಬಿಎಂಟಿಸಿ ಮೇಲೆ 309 ಕೋಟಿ ರೂ., ವಾಯುವ್ಯ ರಸ್ತೆ ಸಾರಿಗೆ ಮೇಲೆ 98 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮೇಲೆ 189 ಕೋಟಿ ರೂ. ಸಾಲದ ಹೊರೆ ಇದೆ. ಡೀಸೆಲ್ ಹಾಗೂ ಸಿಬ್ಬಂದಿ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ. ಡೀಸೆಲ್ ವೆಚ್ಚ ನಿತ್ಯ 13.21 ಕೋಟಿ ರೂ. ಆಗಿದ್ದರೆ, ಸಿಬ್ಬಂದಿ ವೆಚ್ಚ ನಿತ್ಯ 18.36 ಕೋಟಿ ರೂ. ಆಗಿದೆ. ಅಂದರೆ ಒಟ್ಟು ಇಂಧನ ಹಾಗೂ ಸಿಬ್ಬಂದಿ ವೆಚ್ಚವೇ ನಿತ್ಯ 31.57 ಕೋಟಿ ರೂ. ಆಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮೊನ್ನೆಯಷ್ಟೇ ರಾಜ್ಯ ಸರ್ಕಾರ ಆದೇಶ ಹೊರಡಿಸಿ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಒಟ್ಟು 2,000 ಕೋಟಿ ರೂ. ಸರ್ಕಾರದ ಖಾತ್ರಿಯೊಂದಿಗೆ ಸಾಲ ಎತ್ತುವಳಿ ಮಾಡಲು ಅನುಮತಿ ನೀಡಿದೆ. ಆ ಮೂಲಕ ರಸ್ತೆ ಸಾರಿಗೆ ನಿಗಮಗಳು ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕಲಿದೆ. ಅದರಂತೆ ಕ.ರಾ.ರ.ಸಾ. ನಿಗಮಕ್ಕೆ 623 .80 ಕೋಟಿ ರೂ., ಬೆಂ.ಮ.ಸಾ. ಸಂಸ್ಥೆಗೆ 589.20 ಕೋಟಿ ರೂ., ವಾ.ಕ.ರ.ಸಾ. ಸಂಸ್ಥೆಗೆ 646 ಕೋಟಿ ರೂ. ಹಾಗೂ ಕ.ಕ.ರ.ಸಾ. ನಿಗಮಕ್ಕೆ 141 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಅನುಮತಿ ನೀಡಲಾಗಿದೆ.
ಸಾರಿಗೆ ನಿಗಮಗಳು ಎಷ್ಟು ನಷ್ಟದಲ್ಲಿವೆ?:ನಾಲ್ಕು ಸಾರಿಗೆ ನಿಗಮಗಳು ಕಳೆದ ಆರೇಳು ವರ್ಷದಿಂದಲೂ ಸತತ ನಷ್ಟದಲ್ಲೇ ಕಾರ್ಯಾಚರಣೆ ನಡೆಸುತ್ತಿವೆ. ಶಕ್ತಿ ಯೋಜನೆ ಪ್ರಯುಕ್ತ ಪ್ರತಿ ತಿಂಗಳು ಸರಾಸರಿ ಸುಮಾರು 400 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿರುವುದರಿಂದ ನಿಗಮಗಳ ವಾರ್ಷಿಕ ನಷ್ಟದ ಪ್ರಮಾಣದಲ್ಲಿ ಕಡಿಮೆಯಾಗಿದೆ.
- ನಿಗಮಗಳು ನೀಡಿರುವ ಅಂಕಿ - ಅಂಶದ ಪ್ರಕಾರ, ಕೆಎಸ್ಆರ್ಟಿಸಿ 2021-22ರಲ್ಲಿ 423 ಕೋಟಿ ರೂ. ನಷ್ಟ ಅನುಭವಿಸಿತ್ತು. 2022-23ರಲ್ಲಿ 597 ಕೋಟಿ ರೂ. ನಷ್ಟ ಉಂಟಾಗಿತ್ತು. ಅದೇ 2023-24ರಲ್ಲಿ 295 ಕೋಟಿ ರೂ. ನಷ್ಟ ಅನುಭವಿಸಿದೆ.
- ಬಿಎಂಟಿಸಿ 2021-22ರಲ್ಲಿ 178 ಕೋಟಿ ರೂ. ನಷ್ಟ ಕಂಡಿದೆ. 2022-23ರಲ್ಲಿ 997 ಕೋಟಿ ನಷ್ಟ ಕಂಡಿತ್ತು. 2023-24ರಲ್ಲಿ ಬಿಎಂಟಿಸಿ 575 ಕೋಟಿ ನಷ್ಟ ಅನುಭವಿಸಿದೆ.
- ಇತ್ತ ವಾಯುವ್ಯ ರಸ್ತೆ ಸಾರಿಗೆ ನಿಗಮ 2021-22ರಲ್ಲಿ 462 ಕೋಟಿ ರೂ. ನಷ್ಟ ಕಂಡಿದೆ. 2022-23ರಲ್ಲಿ 746 ಕೋಟಿ ನಷ್ಟ ಅನುಭವಿಸಿದೆ. ಅದೇ 2023-24ರಲ್ಲಿ 322 ಕೋಟಿ ರೂ. ನಷ್ಟ ಕಂಡಿದೆ.
- ಇನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ 2021-22ರಲ್ಲಿ 226 ಕೋಟಿ ರೂ. ನಷ್ಟ ಅನುಭವಿಸಿದೆ. 2022-23ರಲ್ಲಿ 320 ಕೋಟಿ ನಷ್ಟ ಕಂಡಿದೆ. 2023-24ರಲ್ಲಿ 161 ಕೋಟಿ ರೂ. ನಷ್ಟ ಉಂಟಾಗಿದೆ.
ಇದನ್ನೂ ಓದಿ:ಬಸ್ ಟಿಕೆಟ್ ದರ ಏರಿಕೆ - ಇಂದು ಮಧ್ಯರಾತ್ರಿಯಿಂದಲೇ ಜಾರಿ: ಎಲ್ಲಿಗೆ ಎಷ್ಟು ದರ ತಿಳಿಯಿರಿ!