ಹುಬ್ಬಳ್ಳಿ :ಹಳೇ ಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನ ಆರೋಪಿಗಳನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು.
ಇಲ್ಲಿನ ಹಳೇಹುಬ್ಬಳ್ಳಿ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ನಗರದಲ್ಲಿ ಮಾರುತಿ ನಾರಾಯಣಪುರ ಎಂಬಾತನ ಮೇಲೆ ಯುವಕರ ಗುಂಪೊಂದು ಅಟ್ಟಾಡಿಸಿ ಚಾಕುವಿನಿಂದ ಬೆನ್ನಿಗೆ ಇರಿದಿದ್ದರು. ಪರಿಣಾಮ ಗಂಭೀರವಾಗಿ ಗಾಯಗೊಂಡ ಮಾರುತಿಯನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.
ಪ್ರಕರಣವನ್ನು ದಾಖಲಿಸಿಕೊಂಡ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಿವಶಂಕರ ಕಾಲೋನಿಯ ನಿವಾಸಿಗಳಾದ ರೋಹಿತ್ ಹಂಚಿನಮನಿ, ವಿಶಾಲ ಬಿಲಾನಾ, ಕುಶಾಲ ವಜ್ಜನ್ನವರ್, ಶ್ರೀನಾಥ್ ದುಂಡಿ, ವಿಶಾಲ ಡೋಣಿ, ಅಜಯ್ ಹಂಚಿನಮನಿ, ಪೃಥ್ವಿರಾಜ್ ಕೌದಿ ಎಂಬುವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಎರಡು ಚಾಕು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಆರೋಪಿಗಳು ಹಾಗೂ ಪಿರ್ಯಾದಿ ನಾರಾಯಣಪುರ್ ನಡುವೆ ಹಳೆಯ ವೈಷಮ್ಯ ಇತ್ತು. ಸುಮಾರು ಒಂದು ವರ್ಷದ ಹಿಂದೆ ಸಿದ್ದಾರೂಢ ಶಾಲೆಯ ಕಾರ್ಯಕ್ರಮದಲ್ಲಿ ನಡೆದ ಘಟನೆಯಿಂದ ಹಳೆಯ ವೈಷಮ್ಯ ಮುಂದುವರೆದಿದ್ದರಿಂದ ನಿನ್ನೆ ಈ ರೀತಿ ಆರೋಪಿಗಳು ಚಾಕು ಇರಿದಿದ್ದಾರೆ ಎಂದರು.