ಮೈಸೂರು: ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದೆ. ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದರು. ಕೇಂದ್ರ ರೇಷ್ಮೆ ಮಂಡಳಿಯ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿಂದು ಆಯೋಜಿಸಲಾಗಿದ್ದ "ಕೇಂದ್ರ ರೇಷ್ಮೆ ಮಂಡಳಿಯ ಪ್ಲಾಟಿನಂ ಜುಬಿಲಿ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ 27 ರಾಜ್ಯಗಳ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿಯೂ ರೇಷ್ಮೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಮೈಸೂರು ಭಾಗದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿ ಹೊಂದಲು ಮೈಸೂರು ಅರಸರ ಕೊಡುಗೆ ಹೆಚ್ಚು. ಚೀನಾದಲ್ಲಿ ಹೆಚ್ಚಿನ ರೇಷ್ಮೆ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತವು ರೇಷ್ಮೆ ಬೆಳೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೇಷ್ಮೆ ಬೆಳೆಗೆ ಕಳೆದ ಎರಡ್ಮೂರು ವರ್ಷಗಳಿಂದ ಉತ್ತಮವಾದ ಬೆಲೆ ಸಿಗುತ್ತಿದೆ. ಇದರಿಂದ ರೇಷ್ಮೆ ಬೆಳೆಗಾರರು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಕೇಂದ್ರ ಸರ್ಕಾರವು 1.52 ಲಕ್ಷ ಕೋಟಿ ಹಣವನ್ನು ಕೃಷಿ ಕ್ಷೇತ್ರಕ್ಕೆ ನೀಡಿದೆ. ಪ್ರತಿ ಕ್ಯಾಬಿನೆಟ್ ಸಭೆಯಲ್ಲಿ ರೈತರ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತವೆ. ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ರೈತರು ಆತ್ಮ ವಿಶ್ವಾಸದಿಂದ ಜೀವನ ನಡೆಸಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತೇವೆ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ದೂರ ದೃಷ್ಟಿಯಿಂದ ಕೇಂದ್ರೀಯ ರೇಷ್ಮೆ ಮಂಡಳಿ ಪ್ರಾರಂಭವಾಯಿತು. ಈ ಮಂಡಳಿಯ ಪ್ರಾರಂಭದಿಂದ ರೇಷ್ಮೆ ಬೆಳೆಯಲ್ಲಿ ಹಲವು ಆವಿಷ್ಕಾರ ಆಗಿದೆ ಎಂದು ಸ್ಮರಿಸಿದರು.