ಬೆಂಗಳೂರು:ರಾಜಕೀಯ ಸಂಧ್ಯಾಕಾಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಿರಿಯ ರಾಜಕಾರಣಿ ಎಸ್.ಎಂ ಕೃಷ್ಣ ಸಕ್ರಿಯ ರಾಜಕೀಯದಲ್ಲಿ ಅಷ್ಟಾಗಿ ತೊಡಗಿಕೊಳ್ಳಲಿಲ್ಲ. ಆದ್ರೂ ಎರಡು ಉಪ ಚುನಾವಣೆ ಮತ್ತು ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಲ್ಲಿಯೂ ಪಾತ್ರವಹಿಸಿದ್ದ ಕೃಷ್ಣ ಇದು ಬಿಜೆಪಿಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ ಎನ್ನಬಹುದು. ನಾಲ್ಕೂವರೆ ದಶಕ ರಾಜಕಾರಣ ನಡೆಸಿದ್ದ ಕೃಷ್ಣ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದು ಕೇವಲ 6 ವರ್ಷಕ್ಕೆ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದರು. ಬಿಜೆಪಿಯಲ್ಲಿ ಕೃಷ್ಣ ಪಯಣದ ಕುರಿತ ಪಕ್ಷಿನೋಟ ಇಲ್ಲಿದೆ.
ಎಸ್ಎಂ ಕೃಷ್ಣ ಅವರು ಕಾಂಗ್ರೆಸ್ನಿಂದ ರಾಜ್ಯಾಧ್ಯಕ್ಷ, ಶಾಸಕ, ಸಂಸದ, ಸಚಿವ, ಸ್ಪೀಕರ್, ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲ ಹುದ್ದೆಯನ್ನು ಅಲಂಕರಿಸಿ ಎಲ್ಲ ಅಧಿಕಾರವನ್ನೂ ಅನುಭವಿಸಿದ್ದರೂ ರಾಜಕೀಯ ನಿವೃತ್ತಿ ಅಂಚಿನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 2017ರ ಮಾರ್ಚ್ 22 ರಂದು ದೆಹಲಿಯಲ್ಲಿ ಕೇಂದ್ರದ ನಾಯಕರು ಸಮ್ಮುಖದಲ್ಲಿ ಎಸ್.ಎಂ ಕೃಷ್ಣ ಅಧಿಕೃತವಾಗಿ ಬಿಜೆಪಿ ಸೇರಿದರು. ನಂತರ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಘೋಷಿಸಿ ಬಿಜೆಪಿ ಪರ ಮೊದಲ ಪ್ರಚಾರ ಕಾರ್ಯ ನಡೆಸಿದರು. ಆದರೆ ನಂತರದ ದಿನಗಳಲ್ಲಿ ಬಿಜೆಪಿಯ ತತ್ವ ಸಿದ್ಧಾಂತಗಳು ಒಗ್ಗದೇ ಇದ್ದ ಕಾರಣ ಅಷ್ಟಾಗಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ತೊಡಗದ ಕೃಷ್ಣ ತಮ್ಮಷ್ಟಕ್ಕೆ ತಾವು ಬಿಜೆಪಿ ಸದಸ್ಯರಾಗಿದ್ದುಕೊಂಡಿದ್ದರು. ಬಿಜೆಪಿಯ ಯಾವುದೇ ಹುದ್ದೆ ಹಾಗು ಜವಾಬ್ದಾರಿಯನ್ನು ವಹಿಸಿಕೊಳ್ಳಲಿಲ್ಲ.
ಒಂದು ವರ್ಷ ಪಕ್ಷದಲ್ಲಿ ತಟಸ್ಥವಾಗಿಯೇ ಉಳಿದುಕೊಂಡಿದ್ದ ಕೃಷ್ಣ ನಂತರ 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಒಕ್ಕಲಿಗ ಪ್ರಾಬಲ್ಯದ ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾನಸ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರಿನ ಮೂರು ಜಿಲ್ಲೆಗಳು, ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದರು. ಪಕ್ಷ ಅಧಿಕಾರಕ್ಕೆ ಬಾರದೇ ಇದ್ದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಅಳಿಲು ಸೇವೆ ಮಾಡಿದ್ದರು. ನಂತರ ಮತ್ತೆ ರಾಜಕಾರಣದಲ್ಲಿ ಅಷ್ಟಾಗಿ ಸಕ್ರೀಯರಾಗಿರದೇ ಇದ್ದ ಕೃಷ್ಣ ವರ್ಷದ ಬಳಿಕ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಕ್ಟಿವ್ ಆದರು.
ರಾಜ್ಯ ಬಿಜೆಪಿ ನಾಯಕರ ಆಹ್ವಾನ ಸಮ್ಮತಿಸಿದ್ದ ಕೃಷ್ಣ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ಗೆ ಬಿಜೆಪಿ ಬೆಂಬಲ ಘೋಷಿಸಿದ್ದರಿಂದ ಕೃಷ್ಣ ಸುಮಲತಾ ಪರವಾಗಿಯೇ ಮತಯಾಚನೆ ಮಾಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಪಕ್ಷದ ಮಟ್ಟಿಗೆ ದಾಖಲೆ ಎನ್ನುವಂತೆ 25 ಸ್ಥಾನಗಳನ್ನು ಗೆಲ್ಲುವ ಜೊತೆಗೆ ಬೆಂಬಲ ನೀಡಿದ್ದರು. ಇದರಲ್ಲಿ ಕೃಷ್ಣ ಪಾತ್ರವೂ ಇದೆ ಎನ್ನುವುದನ್ನು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ.