ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಹೀಗಿದ್ದರೂ ಎನ್ಒಸಿ ನೀಡದೆ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆರೋಪಿಸಿದ್ದು, ಯತ್ನಾಳ್ ಬೆಂಬಲಕ್ಕೆ ಧಾವಿಸಿದ್ದಾರೆ. ಪಿಸಿಬಿ, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ರವಾನಿಸಿದ್ದಾರೆ.
ಮಂಗಳವಾರದಿಂದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಎನ್ಒಸಿಗಾಗಿ ಕಾದು ಕುಳಿತು ಧರಣಿ ರೂಪದಲ್ಲಿ ಪಿಸಿಬಿ ಕಚೇರಿಯಲ್ಲಿಯೇ ಇರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಕ್ಕೆ ಬಿಜೆಪಿ ನಾಯಕರು ಧಾವಿಸಿದ್ದಾರೆ. ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಡಿಸಿಎಂ ಅಶ್ವತ್ಥ್ನಾರಾಯಣ್, ಶಾಸಕ ಅರವಿಂದ ಬೆಲ್ಲದ್, ಎಂಎಲ್ಸಿ ಸಿ ಟಿ ರವಿ ಸೇರಿದಂತೆ ಹಲವು ನಾಯಕರು ಪಿಸಿಬಿ ಕಚೇರಿಗೆ ತೆರಳಿ ಯತ್ನಾಳ್ ಬೆಂಬಲಕ್ಕೆ ನಿಂತಿದ್ದಾರೆ. ಎನ್ಒಸಿ ನೀಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಕಾನೂನು, ನ್ಯಾಯ ಸತ್ತುಹೋಗಿದೆ. ದ್ವೇಷದ ರಾಜಕಾರಣ ನಡೆಯುತ್ತಿದೆ. ಎಲ್ಲವೂ ಕಾನೂನು ಪ್ರಕಾರ ಮಾಡಿಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಕ್ಕರೆ ಕಾರ್ಖಾನೆ ಶುರು ಮಾಡಿದ್ದರು. ಆದರೆ ಕಳೆದ ವರ್ಷ ಇವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿ ಕಾರ್ಖಾನೆ ಮುಚ್ಚಿಸಿತ್ತು. ಆಗ ಯತ್ನಾಳ್ ಕೋರ್ಟ್ ಮೊರೆ ಹೋದರು. ಕೋರ್ಟ್ ನಾಲ್ಕು ವಾರದೊಳಗೆ ಕಾರ್ಖಾನೆ ಪುನಾರಂಭಕ್ಕೆ ಆದೇಶ ಕೊಟ್ಟಿತು. ಯತ್ನಾಳ್ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಈಗ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅನುಮತಿ ಕೊಡ್ತಿಲ್ಲ. ಪಿಸಿಬಿಯವರು ತಾಂತ್ರಿಕ ಕಾರಣದ ನೆಪ ಹೇಳ್ತಿದ್ದಾರೆ ಎಂದರು.
ಬಹಳ ದೊಡ್ಡ ತಾರತಮ್ಯ ಮಾಡ್ತಿದೆ ಪಿಸಿಬಿ. ಹಲವು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಟ್ಟು, ಇವರಿಗೆ ತಾರತಮ್ಯ ಮಾಡಲಾಗ್ತಿದೆ. ಕಾನೂನು ಉಲ್ಲಂಘಿಸಿದ ಕಾರ್ಖಾನೆಗಳಿಗೆ ಅನುಮತಿ ಕೊಟ್ಟಿದೆ. ನಾವು ಇದನ್ನು ಇಲ್ಲಿಗೆ ಬಿಡಲ್ಲ, ಹೋರಾಟ ಮಾಡ್ತೇವೆ. ಈ ಕಾರ್ಖಾನೆ ನಂಬಿ ಸಾವಿರಾರು ರೈತರು ಇದ್ದಾರೆ. ಈ ಸಲ ಆ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆದಿದ್ದಾರೆ. ಈಗ ಕಾರ್ಖಾನೆ ತೆರೆಯಬೇಕಿದೆ. ಸರ್ಕಾರ ಒಂದು ಕಡೆ ಉತ್ತರ ಕರ್ನಾಟಕ ಕಡೆ ಕೈಗಾರಿಕೆಗಳು ಬರಬೇಕು ಅನ್ನುತ್ತದೆ. ಆದರೆ ಇನ್ನೊಂದು ಕಡೆ ಈ ರೀತಿಯ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.