ಬೆಂಗಳೂರು:ಕ್ರೌರ್ಯದ ಆಧಾರದಲ್ಲಿ ಪತಿ ಮೊದಲ ಬಾರಿ ಸಲ್ಲಿಸಿದ್ದ ವಿವಾಹ ವಿಚ್ಛೇದನ ಅರ್ಜಿ ತಿರಸ್ಕೃತಗೊಂಡಿದ್ದರೆ ಆಂತಹ ಸಂದರ್ಭದಲ್ಲಿ ಎರಡನೇ ಸಲ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿರಲಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ಜತೆಗೆ ಪತಿಯೊಬ್ಬ ತನ್ನ ಮೊದಲನೇ ವಿವಾಹ ವಿಚ್ಛೇದನ ಅರ್ಜಿ ತಿರಸ್ಕೃತಗೊಂಡ ನಂತರ ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ವಿಚ್ಚೇದನ ಅರ್ಜಿ ತಿರಸ್ಕರಿಸಿದ್ದ ಮೈಸೂರಿನ ನ್ಯಾಯಾಲಯದ ಆದೇಶ ರದ್ದುಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ. ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಿಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅಲ್ಲದೇ ಒಂದು ವೇಳೆ ಪತಿ ತನ್ನ ಮಗನಿಗಾಗಿ ಕಾನೂನು ಬದ್ಧ ನಿರ್ವಹಿಸಬೇಕಾಗಿರುವ ಕರ್ತವ್ಯಗಳನ್ನು ಪಾಲನೆ ಮಾಡದಿದ್ದರೂ ಸಹ ಆತ ತನ್ನ ವಿರುದ್ಧ ಪತ್ನಿಯ ಮಾನಸಿಕ ಕೌರ್ಯವನ್ನು ಸಾಬೀತುಪಡಿಸಿದರೆ ಸಾಕು, ಅತನಿಗೆ ವಿವಾಹ ವಿಚ್ಛೇದನ ಮಂಜೂರು ಮಾಡಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪತಿ ಹಾಗೂ ಪತ್ನಿ ಪರಸ್ಪರ ಮಗುವಿನ ಸುಪರ್ದಿ ಮತ್ತು ನಿರ್ವಹಣೆ ವಿಚಾರದಲ್ಲಿ ಒಪ್ಪಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದರೆ ಪತ್ನಿ ಪತಿಯ ಅನೈತಿಕ ಸಂಬಂಧವನ್ನು ಸಾಬೀತುಪಡಿಸಿಲ್ಲ. ಜತೆಗೆ ಅರ್ಜಿದಾರರು ಹೇಳಿರುವಂತೆ ಪತ್ನಿ, ಪತಿಯ ಕಚೇರಿಗೆ ಹೋಗಿ ಅವರ ಸಹೋದ್ಯೋಗಿಗಳ ಮುಂದೆ ಸಾಕಷ್ಟು ಹೀಯಾಳಿಸಿ ಮಾತನಾಡಿದ್ದಾರೆ. ಇದನ್ನು ಪಾಟೀ ಸವಾಲಿನಲ್ಲಿ ಪತ್ನಿ ನಿರಾಕರಿಸಿಲ್ಲ. ಇದನ್ನು ಪರಿಗಣಸಿದರೆ ಪತಿ ಪತ್ನಿಯಿಂದ ಮೌನಸಿಕ ಕ್ರೌರ್ಯ ಅನುಭವಿಸುತ್ತಿದ್ದೇನೆ ಎನ್ನುವ ವಾದದಲ್ಲಿ ಹುರುಳಿದೆ. ಹಾಗಾಗಿ ಪತಿಗೆ ವಿಚ್ಛೇದನ ಮಂಜೂರು ಮಾಡಲಾಗುವುದು ಪೀಠ ಹೇಳಿದೆ.