ಬೆಂಗಳೂರು: ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಸಚಿವರು, ಶಾಸಕರು, ಪಕ್ಷದ ಮುಖಂಡರ ಪ್ರಚಾರ ಉತ್ತರಕರ್ನಾಟಕ, ಮಧ್ಯ ಕರ್ನಾಟಕದ ಕಡೆ ಕೇಂದ್ರಿಕೃತವಾಗಿದೆ.
ಎರಡನೇ ಹಂತದಲ್ಲಿ ಸುಮಾರು 2.50 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಉತ್ತರಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ ಹಾಗೂ ಧಾರವಾಡ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಕಣದಲ್ಲಿ 227 ಅಭ್ಯರ್ಥಿಗಳಿದ್ದಾರೆ. ಇವರ ಪೈಕಿ 206 ಪುರುಷ ಅಭ್ಯರ್ಥಿಗಳು ಹಾಗೂ 21 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಎರಡನೇ ಹಂತದ ಚುನಾವಣೆಗಾಗಿ 28,269 ಮತಗಟ್ಟೆಗಳನ್ನು ತೆರೆಯಲಾಗಿದೆ.
ನೇರ ಹಣಾಹಣಿ: 12 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಂಡಾಯದ ಕಾರಣ ಶಿವಮೊಗ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ. ಈ ನಡುವೆ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಮತದಾನಕ್ಕಾಗಿ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮಧ್ಯ ಹಾಗೂ ಉತ್ತರ ಕರ್ನಾಟಕದತ್ತ ಲಗ್ಗೆಯಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿ.ಎಂ.ಗಳಾದ ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಆಖಾಡಕ್ಕಿಳಿದಿದ್ದಾರೆ.
ಕುತೂಹಲ ಕೆರಳಿಸಿದ ಕ್ಷೇತ್ರಗಳು: ಶಿವಮೊಗ್ಗ, ಬೆಳಗಾವಿ, ಚಿಕ್ಕೋಡಿ, ಹಾವೇರಿ ಹಾಗೂ ದಾವಣಗೆರೆ ತೀವ್ರ ಕುತೂಹಲ ಕೆರಳಿಸಿದ ಕ್ಷೇತ್ರಗಳಾಗಿವೆ. ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಕಣದಲ್ಲಿದ್ದರೆ, ಚಿಕ್ಕೋಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಕಣದಲ್ಲಿದ್ದಾರೆ. ಅಲ್ಲದೆ ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಅಖಾಡಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಘಟನಾನುಘಟಿ ನಾಯಕರು ಈ ಕ್ಷೇತ್ರಗಳತ್ತ ದೌಡಾಯಿಸಿದ್ದಾರೆ. ಇನ್ನು ಬಿಜೆಪಿಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಂಡಾಯ ಸಾರಿದ್ದಾರೆ. ಬಿ.ವೈ ರಾಘವೇಂದ್ರ ವಿರುದ್ಧ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಎದುರಾಳಿಯಾಗಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಈ ಕ್ಷೇತ್ರದತ್ತ ನೆಟ್ಟಿದೆ.