ಕರ್ನಾಟಕ

karnataka

ETV Bharat / state

ಕಾರವಾರ: ಜಿಲ್ಲಾಧ್ಯಕ್ಷರ ಸಮ್ಮುಖದಲ್ಲೇ ಕೈ ಕೈ ಮಿಲಾಯಿಸಿಕೊಂಡ ಬಿಜೆಪಿ ಕಾರ್ಯಕರ್ತರು - Dissent In Karwar BJP

ಕಾರವಾರದಲ್ಲಿ ಶನಿವಾರ ನಡೆದ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರುದ್ಧ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು ಸಭೆ ಅರ್ಧದಲ್ಲೇ ಮೊಟಕುಗೊಂಡಿತು.

ಜಿಲ್ಲಾಧ್ಯಕ್ಷರ ಸಮ್ಮುಖವೇ ಕೈ ಮಿಲಾಯಿಸಿಕೊಂಡ ಬಿಜೆಪಿ ಕಾರ್ಯಕರ್ತರು
ಜಿಲ್ಲಾಧ್ಯಕ್ಷರ ಸಮ್ಮುಖದಲ್ಲೇ ಕೈ ಕೈ ಮಿಲಾಯಿಸಿಕೊಂಡ ಬಿಜೆಪಿ ಕಾರ್ಯಕರ್ತರು (ETV Bharat)

By ETV Bharat Karnataka Team

Published : Sep 1, 2024, 7:27 AM IST

ಜಿಲ್ಲಾಧ್ಯಕ್ಷರ ಸಮ್ಮುಖದಲ್ಲೇ ಕೈ ಕೈ ಮಿಲಾಯಿಸಿಕೊಂಡ ಬಿಜೆಪಿ ಕಾರ್ಯಕರ್ತರು (ETV Bharat)

ಕಾರವಾರ: ಕಳೆದ ವಿಧಾನಸಭೆ ಚುನಾವಣೆಯ ನಂತರ ಹಳಿಯಾಳ ಬಿಜೆಪಿಯಲ್ಲಿ ಭುಗಿಲೆದ್ದಿದ್ಧ ಭಿನ್ನಮತ ಶನಿವಾರ ಕರೆದ ಸದಸ್ಯತ್ವ ಅಭಿಯಾನದ ಸಭೆಯಲ್ಲೂ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ವರಿಷ್ಠರ ಸಮ್ಮುಖದಲ್ಲಿ ಸ್ಫೋಟಗೊಂಡು ಬೀದಿಗೆ ಬಂದಿದೆ. ಇದರಿಂದಾಗಿ, ಸಭೆ ಮೊಟಕುಗೊಂಡು ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ವರಿಷ್ಠರಿಗೆ ಇರಿಸುಮುರಿಸಾಯಿತು.

ಜಿಲ್ಲಾಧ್ಯಕ್ಷ ಎನ್.ಎಸ್​.ಹೆಗಡೆ ಹಾಗೂ ಜಿಲ್ಲಾ ವರಿಷ್ಠರೆದುರೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಳಿಯಾಳದ ಶಿವಾಜಿ ನರಸಾನಿ ಅವರನ್ನು ಎಳೆದಾಡಿದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದರು. ತಕ್ಷಣ ಮಧ್ಯಪ್ರವೇಶಿಸಿದ ಹಳಿಯಾಳ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಬಿಗಿ ಬಂದೋಬಸ್ತ್​ನಲ್ಲಿ ಜಿಲ್ಲಾಧ್ಯಕ್ಷ ಮತ್ತು ಜಿಲ್ಲಾ ವರಿಷ್ಠರನ್ನು ಕಾರಿಗೆ ಹತ್ತಿಸಿ ಕಳಿಸಿದ್ದಾರೆ.

ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಅಧ್ಯಕ್ಷತೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಳಿಯಾಳದ ಪ್ರಭಾರೆಯಾಗಿರುವ ನಿತ್ಯಾನಂದ ಗಾಂವಕರ, ಗುರುಪ್ರಸಾದ ಹೆಗಡೆ, ಪ್ರಶಾಂತ ನಾಯ್ಕ, ಹಾಗೂ ಸದಸ್ಯತ್ವ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಸುಧಾಕರ ರೆಡ್ಡಿ ಆಗಮಿಸಿದ್ದರು. ಇವರೊಂದಿಗೆ ಸ್ಥಳೀಯರಾಗಿರುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಸಹ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು.

ಆದರೆ, ಶಿವಾಜಿ ನರಸಾನಿ ಅವರನ್ನು ಕಂಡು ಕೋಪಗೊಂಡ ಹಳಿಯಾಳ ಬಿಜೆಪಿ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಿವಾಜಿ ನರಸಾನಿ ಉಪಸ್ಥಿತಿಯನ್ನು ಆಕ್ಷೇಪಿಸಿದರು. ಅವರಿಗೆ ಸಭೆಗೆ ಪ್ರವೇಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ವಿಧಾನಸಭಾ ಚುನಾವಣೆಯಲ್ಲಿ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು, ಸಭೆಗೆ ಬರಕೂಡದು ಎಂದು ಆಕ್ರೋಶ ಹೊರಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷ ಹೆಗಡೆ, "ಪಕ್ಷದ ಶಿಸ್ತು, ನಿಯಮದಂತೆ ನಾನು ಜಿಲ್ಲಾಪ್ರಧಾನ ಕಾರ್ಯದರ್ಶಿ ನರಸಾನಿ ಅವರನ್ನು ಬಿಟ್ಟು ಸಭೆ ನಡೆಸಲು ಆಗುವುದಿಲ್ಲ. ನಿಮ್ಮ ಆಕ್ಷೇಪಣೆಗಳಿದ್ದರೆ ಕುಳಿತು ಚರ್ಚಿಸುವ" ಎಂದು ಮನವಿ ಮಾಡಿದರು. ಆದರೆ ಸ್ಥಳೀಯ ಬಿಜೆಪಿ ಮುಖಂಡರು ಇದನ್ನು ಸುತಾರಾಂ ಒಪ್ಪಲಿಲ್ಲ. ಈ ವಾಗ್ವಾದಗಳ ಮದ್ಯೆ ಜಿಲ್ಲಾ ವರಿಷ್ಠರೊಬ್ಬರು ಆಕ್ಷೇಪಿಸುತ್ತಿರುವ ಮುಖಂಡರನ್ನು ನೀವು ದೇಶಪಾಂಡೆ ಏಜೆಂಟರೆಂದು ಸಂಭೋದಿಸಿದ್ದರಿಂದ ಕಾರ್ಯಕರ್ತರು ಕೆರಳಿದರು.

ಈ ಸಂದರ್ಭದಲ್ಲಿ ನಡೆದ ವಾಗ್ವಾದ, ಎಳೆದಾಟದಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ಶಿವಾಜಿ ನರಸಾನಿಯವರನ್ನು ಎಳೆದಾಡಿ ಹಲ್ಲೆ ಮಾಡಿದ್ದಾನೆ. ಇದರಿಂದ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಹಳಿಯಾಳ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ, ಜಿಲ್ಲಾಧ್ಯಕ್ಷರನ್ನು ಮತ್ತು ಜಿಲ್ಲಾ ವರಿಷ್ಠರನ್ನು ಹೊರಗಡೆ ಕರೆತಂದು ಕಾರಿನಲ್ಲಿ ಹತ್ತಿಸಿ ಕಳಿಸಿದರು.

ಶಿಸ್ತು ಕ್ರಮಕ್ಕೆ ಸೂಚಿಸುವೆ- ಜಿಲ್ಲಾಧ್ಯಕ್ಷ: ಘಟನೆ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, "ನಮ್ಮದು ಶಿಸ್ತು, ಸಿದ್ಧಾಂತ ಇರುವ ಪಕ್ಷ. ನಮ್ಮಲ್ಲಿ ಸಾಮೂಹಿಕ ನಾಯಕತ್ವವಿದೆ. ಆದರೆ ಹಳಿಯಾಳದಲ್ಲಿ ಕೆಲವರು ಪಕ್ಷದ ನಿಯಮಾವಳಿಯನ್ನು ಅರಿತುಕೊಳ್ಳದೇ ನಡೆದುಕೊಂಡಿದ್ದು ನಮ್ಮ ಮನಸ್ಸಿಗೆ ನೋವಾಗಿದೆ. ಇಲ್ಲಿನ ಬೆಳವಣಿಗೆಗಳನ್ನು ರಾಜ್ಯ ಘಟಕದ ಗಮನಕ್ಕೆ ತರಲಿದ್ದು, ಅವರು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರ ಆದೇಶದಂತೆ ನಾವು ಪ್ರತಿ ತಾಲೂಕಿನಲ್ಲಿ ಸದಸ್ಯತ್ವದ ಅಭಿಯಾನದ ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಶನಿವಾರ ನಾವು ಹಳಿಯಾಳದಲ್ಲಿ ಸದಸ್ಯತ್ವ ಕಾರ್ಯಾಗಾರವನ್ನು ನಡೆಸಲು ಆಗಮಿಸಿದ್ದೆವು. ಈ ಸಂದರ್ಭದಲ್ಲಿ ಹಳಿಯಾಳ ಬಿಜೆಪಿಯ ಕೆಲವರು ಪಕ್ಷದ ಚೌಕಟ್ಟನ್ನು ಮೀರಿ ನಡೆದುಕೊಂಡಿದ್ದು, ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ"ಎಂದರು.

ನರಸಾನಿ ಹಳೆಯ ಕಾರ್ಯಕರ್ತರು- ಜಿಲ್ಲಾಧ್ಯಕ್ಷ: "ಶಿವಾಜಿ ನರಸಾನಿಯವರು ಸಂಘಪರಿವಾರದವರು. ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದ್ದಾರೆ. ಅವರಿಗೆ ಜಿಲ್ಲಾ ಘಟಕದಲ್ಲಿಯೂ ಜವಾಬ್ದಾರಿಯುತ ಸ್ಥಾನವನ್ನು ನಮ್ಮ ರಾಜ್ಯ ವರಿಷ್ಠರು ನೀಡಿದ್ದಾರೆ. ಹೀಗಿರುವಾಗ ಹಳಿಯಾಳ ಮಂಡಳದವರು ಅವರ ವಿರುದ್ಧ ಸೂಕ್ತ ಸಾಕ್ಷಾಧಾರಗಳನ್ನು ನೀಡದೇ ಆಧಾರರಹಿತ ಆರೋಪ ಮಾಡಿದರೆ ಹೇಗೆ ಕ್ರಮ ಕೈಗೊಳ್ಳಬೇಕು?. ಆರೋಪದ ಬದಲು ದಾಖಲೆ ನೀಡಿದರೆ ನಾವೇ ಕ್ರಮ ಕೈಗೊಳ್ಳುತ್ತೇವೆ" ಎಂದು ಎನ್.ಎಸ್.ಹೆಗಡೆ ಹೇಳಿದ್ದಾರೆ.

ಜಿಲ್ಲಾ ಸಮಿತಿಗೆ ಮಾಜಿ ಶಾಸಕ ಸುನೀಲ ಹೆಗಡೆ ಪ್ರಶ್ನೆ:"ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಜೊತೆ ಇದ್ದಂತೆ ತೋರಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಶಿವಾಜಿ ನರಸಾನಿ ಹಾಗೂ ಇನ್ನುಳಿದ ಮೂವರು ಕಾರ್ಯರ್ತರ ಮೇಲೆ ಪಕ್ಷವು ಸರಿಯಾದ ಕ್ರಮವನ್ನು ಕೈಗೊಳ್ಳಬೇಕು. ನನ್ನ ಅನುಪಸ್ಥಿತಿಯಲ್ಲಿ ಈ ರೀತಿ ಘಟನೆ ನಡೆದಿದ್ದು, ಈ ಬಗ್ಗೆ ನನಗೆ ನೋವಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನರಸಾನಿ, ಗಣಪತಿ ಕರಂಜೇಕರ, ವಿ.ಎಂ.ಪಾಟೀಲ ಹಾಗೂ ಅನಿಲ್ ಮುತ್ನಾಳೆಯವರ ಬಗ್ಗೆ ಜಿಲ್ಲಾ ಸಮಿತಿಯ ಗಮನಕ್ಕೆ ತಂದರೂ ಏಕೆ ಕ್ರಮ ಕೈಗೊಂಡಿಲ್ಲ?. ನಾಲ್ವರ ಪಕ್ಷ ವಿರೋಧಿ ಚಟುವಟಿಕೆಯಿಂದ ಕಳೆದ ಚುನಾವಣೆಯಲ್ಲಿ ಹಳಿಯಾಳದಲ್ಲಿ ಪಕ್ಷವು ಸೋಲಬೇಕಾಯಿತು. ಅದಲ್ಲದೇ ಈ ನಾಲ್ವರು ಬಹಿರಂಗವಾಗಿ ನಾಯಕರ ಬಗ್ಗೆ ಅದಲ್ಲದೇ ಪಕ್ಷದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿರುವ ಬಗ್ಗೆ ಸಹಜವಾಗಿ ನಮ್ಮ ಕಾರ್ಯಕರ್ತರಿಗೆ ಆಕ್ರೋಶವಿದೆ."

"ಈ ಸದಸ್ಯತ್ವ ಅಭಿಯಾನದ ಸಭೆ ಹಮ್ಮಿಕೊಳ್ಳುವ ಮೂರು ದಿನ ಮೊದಲೇ ಈ ನಾಲ್ವರನ್ನು ಸಭೆಗೆ ಕರೆಯದಂತೆ ಜಿಲ್ಲಾಧ್ಯಕ್ಷರಿಗೆ ಕಾರ್ಯಕರ್ತರು ತಿಳಿಸಿ ಮನವಿ ಮಾಡಿದ್ದಾರೆ. ಹೀಗಿರುವಾಗಲೂ ಶಿವಾಜಿ ನರಸಾನಿಯವರು ಸಭೆಗೆ ಆಗಮಿಸಿದನ್ನು ಕಂಡು ಕಾರ್ಯಕರ್ತರ ಸಹನೆಯ ಕಟ್ಟೆ ಒಡೆದಿದೆ. ಜಿಲ್ಲಾ ಸಮಿತಿಯ ಒಬ್ಬರು ನಮ್ಮ ಕಾರ್ಯಕರ್ತರನ್ನು ದೇಶಪಾಂಡೆ ಏಜೆಂಟ್ ಎಂದು ಹೇಳಿದ್ದರಿಂದ ವಾತಾವರಣ ಹದಗೆಟ್ಟು ಈ ರೀತಿಯ ಅಹಿತಕರ ಘಟನೆ ನಡೆಯಲು ಕಾರಣವಾಯಿತು. ಜಿಲ್ಲಾಧ್ಯಕ್ಷರು ಹಳಿಯಾಳ ಮಂಡಲದ ವಿರುದ್ಧ ವರ್ತಿಸದೇ ಪಾರದರ್ಶಕವಾಗಿ ನಡೆಯಲಿ, ರಾಜ್ಯದ ವರಿಷ್ಠರು ಪಕ್ಷದ ಏಳ್ಗೆಗಾಗಿ ನಾನು ಹಾಗೂ ಕಾರ್ಯಕರ್ತರು ಪಡುತ್ತಿರುವ ಶ್ರಮದ ಬಗ್ಗೆ ಹಾಗೂ ಇಲ್ಲಿ ಪಕ್ಷ ವಿರೋಧಿ ಕೆಲಸ ಮಾಡುವವರ ಬಗ್ಗೆಯೂ ಸಮಗ್ರ ಪರಿಶೀಲನೆ ನಡೆಸಲಿ" ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್: ಸೋಮವಾರಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ - Prosecution against Siddaramaiah

ABOUT THE AUTHOR

...view details