ಬೆಂಗಳೂರು:''ಅಂಗವಿಕಲರ ಸಬಲೀಕರಣಕ್ಕಾಗಿ ಸರ್ಕಾರಗಳು ಎಷ್ಟೇ ಕಾನೂನುಗಳನ್ನು ಜಾರಿ ಮಾಡಿದರೂ ಅದನ್ನು ಅನುಷ್ಠಾನಗೊಳಿಸುವುದು ಮುಖ್ಯವಾಗಿರಲಿದೆ'' ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ.ಡಿ. ವೈ. ಚಂದ್ರಚೂಡ್ ತಿಳಿಸಿದ್ದಾರೆ.
ಫಂಕ್ಷನ್ಸ್ ಆಫ್ ಇಂಡಿಯಾ ಆಕ್ಸಿಸ್ ಎಬಿಲಿಟಿ ಸಮ್ಮಿಟ್, ರಾಜ್ಯ ಸರ್ಕಾರ ಮತ್ತು ರಾಮಯ್ಯ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಮಾವೇಶದಲ್ಲಿ ಮಾತನಾಡಿದರು. ''ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರಲಿದೆ. ಆದರೆ, ಅಧಿಕಾರಿ ವರ್ಗ ಅವುಗಳನ್ನು ಬಲಿಷ್ಠವಾಗಿ ಜಾರಿ ಮಾಡಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಯೋಜನೆ ಇದ್ದರೂ ಅದು ವಿಫಲವಾದಂತಾಗಲಿದೆ'' ಎಂದು ಅಭಿಪ್ರಾಯಪಟ್ಟರು.
''ತಾವು ಒಬ್ಬ ಮುಖ್ಯ ನ್ಯಾಯಮೂರ್ತಿಯ ಬದಲಾಗಿ ಅಂಗವಿಕಲ ಹೆಣ್ಣು ಮಕ್ಕಳ ತಂದೆಯಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಅಂಗವಿಕಲರ ನೋವು ಮತ್ತು ಸವಾಲುಗಳು ಬಗ್ಗೆ ತಮಗೆ ಅರಿವಿದೆ. ಜನರು ಅಂಗವಿಕಲರನ್ನು ನೋಡುವ ದೃಷ್ಟಿ ಬದಲಾಗಬೇಕು'' ಎಂದರು. ''ನಾನು ನನ್ನ ಮಗಳಿಂದ ಸಾಕಷ್ಟು ಕಲಿತಿದ್ದೇನೆ. ಅಂಗವಿಕಲರಿಗೆ ಕೆಲವೊಂದು ಅಂಗ ಮಾತ್ರ ಊನ ಇದ್ದು, ಉಳಿದಂತೆ ಅವರು ಸಹ ಸಾಮಾನ್ಯರಂತೆ ಇರಲು ಬಯಸುತ್ತಾರೆ. ಅವರಿಗೂ ಇತರರಂತೆ ಸಾಧನೆ ಮಾಡಲು ಮುಕ್ತ ಅವಕಾಶವನ್ನು ನಾವು ಕಲ್ಪಿಸಿಕೊಡಬೇಕಾಗುತ್ತದೆ'' ಎಂದು ಅವರು ಇದೇ ವೇಳೆ ವಿವರಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಬಿ.ವಿ. ನಾಗರತ್ನ ಮಾತನಾಡಿ, ''ಜನರಿಗೆ ಅಂಗವಿಕಲ ಜನರ ಬಗ್ಗೆ ಅರಿವು ಮೂಡಬೇಕಿದೆ. ಚಲನಚಿತ್ರಗಳಲ್ಲಿ ಅಂಗವಿಕಲರ ಬಗ್ಗೆ ತೋರಿಸಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದು ಇದೇ ರೀತಿ ಮುಂದುವರೆಯಬೇಕು. ಕಾನೂನು ಸಹ ಅವರ ಪರವಾಗಿ ಕೆಲಸ ಮಾಡಬೇಕಿದೆ'' ಎಂದರು.