ಬೆಳಗಾವಿ : ಬೆಳಗಾವಿ ಮಹಾನಗರ ನೂತನ ಮೇಯರ್ ಆಗಿ ಸವಿತಾ ಕಾಂಬಳೆ ಅವರು ಅವಿರೋಧ ಆಯ್ಕೆಯಾಗಿದ್ದು, ಉಪಮೇಯರ್ ಸ್ಥಾನ ಆನಂದ ಚವ್ಹಾಣ್ ಪಾಲಾಗಿದೆ.
ನಗರದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ ನೇತೃತ್ವದಲ್ಲಿ ಮೇಯರ್ ಉಪಮೇಯರ್ ಚುನಾವಣೆ ನಡೆಯಿತು. 5 ವರ್ಷಗಳ ಬಳಿಕ ಬೆಳಗಾವಿ ಮಹಾನಗರಕ್ಕೆ ಕನ್ನಡ ಭಾಷಿಕ ಮೇಯರ್ ಆಯ್ಕೆಯಾಗಿದ್ದಾರೆ. 2018-19 ರಲ್ಲಿ ಬೆಳಗಾವಿ ಮೇಯರ್ ಆಗಿದ್ದ ಬಸವರಾಜ್ ಚಿಕ್ಕಲದಿನ್ನಿ ಆಯ್ಕೆ ಆಗಿದ್ದರು. 22ನೇ ಅವಧಿಗೆ ಮೇಯರ್ ಆಗಿ ಸವಿತಾ ಕಾಂಬಳೆ ಅವಿರೋಧ ಆಯ್ಕೆಯಾಗಿದ್ದಾರೆ. ಇದರಿಂದ ಲಕ್ಷ್ಮಿ ರಾಥೋಡ್‌ಗೆ ನಿರಾಸೆಯಾಗಿದೆ.
ಬೆಳಗಾವಿ ಮೇಯರ್ ಸವಿತಾ ಕಾಂಬಳೆ ಬಿಜೆಪಿಯ ಮೊದಲ ಕನ್ನಡ ಭಾಷಿಕ ಮೇಯರ್ ಎಂಬ ಕೀರ್ತಿಗೂ ಸವಿತಾ ಕಾಂಬಳೆ ಪಾತ್ರರಾಗಿದ್ದಾರೆ. ಲಕ್ಷ್ಮಿ ರಾಥೋಡ್ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ್ ಅವರು ನೂತನ ಮೇಯರ್ ಆಗಿ ಸವಿತಾ ಕಾಂಬಳೆ ಹೆಸರನ್ನು ಘೋಷಣೆ ಮಾಡಿದರು. ಲೋಕಸಭೆ ಚುನಾವಣೆ ಹೊತ್ತಲ್ಲೇ ಸಾಮಾನ್ಯ ಕಾರ್ಮಿಕ ಮಹಿಳೆಗೆ ಮೇಯರ್ ಪಟ್ಟ ಕಟ್ಟಿದ್ದು, ಪಾಲಿಕೆ ಸದಸ್ಯೆ ಆಗುವ ಮೊದಲು ವಿವಿಧ ಕಂಪನಿಗಳಲ್ಲಿ ಸಾಮಾನ್ಯ ಕಾರ್ಮಿಕರಾಗಿ ಸವಿತಾ ಸೇವೆ ಸಲ್ಲಿಸಿದ್ದಾರೆ.
ಬೆಳಗಾವಿ ಮಹಾನಗರದ ನೂತನ ಡೆಪ್ಯುಟಿ ಮೇಯರ್ ಆಗಿ ಬಿಜೆಪಿಯ ಆನಂದ ಚವ್ಹಾಣ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ಜ್ಯೋತಿ ಕಡೋಲ್ಕರ್ ವಿರುದ್ಧ 20 ಮತಗಳ ಅಂತರದಿಂದ ಆನಂದ ಚವ್ಹಾಣ್ ಗೆಲುವು ಸಾಧಿಸಿದರು. ಬಿಜೆಪಿಯ ಆನಂದ ಚವ್ಹಾಣ್ಗೆ 39 ಹಾಗೂ ಕಾಂಗ್ರೆಸ್‌ನ ಜ್ಯೋತಿ ಕಡೋಲ್ಕರ್‌ಗೆ 20 ಮತಗಳು ಬಂದವು. ಎರಡನೇ ಅವಧಿಗೂ ಮರಾಠಾ ಭಾಷಿಕರಿಗೆ ಬೆಳಗಾವಿ ಡೆಪ್ಯುಟಿ ಮೇಯರ್ ಸ್ಥಾನ ಒಲಿದಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ಕನ್ನಡ ಹಾಗೂ ಮರಾಠಾ ಸಮುದಾಯಗಳ ಓಲೈಕೆಗೆ ಪಕ್ಕಾ ಪ್ಲಾನ್ ಮಾಡಲಾಗಿದ್ದು, ಕನ್ನಡ ಭಾಷಿಕ ಸವಿತಾಗೆ ಮೇಯರ್ ಹಾಗೂ ಮರಾಠಾ ಭಾಷಿಕ ಆನಂದ ಚವ್ಹಾಣ್ಗೆ ಉಪ ಮೇಯರ್ ಸ್ಥಾನವನ್ನು ಬಿಜೆಪಿ ಕೊಟ್ಟಿದೆ.
ಬೆಳಗಾವಿಯ ಮಹಾನಗರ ನೂತನ ಮೇಯರ್ ಸವಿತಾ ಕಾಂಬಳೆ ಮೇಯರ್ ಸವಿತಾ ಕಾಂಬಳೆ ಮಾತನಾಡಿ, ಬೆಳಗಾವಿ ಜನತೆ ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕೇವಲ ಅಭಿವೃದ್ಧಿ ಕೆಲಸದ ವಿಚಾರವನ್ನು ನಾನು ಮಾತನಾಡುತ್ತೇನೆ. ನಾನೋರ್ವ ಕಾರ್ಮಿಕ ಮಹಿಳೆ. ಮಹಾಪೌರ ಸ್ಥಾನ ಅಲಂಕರಿಸಿದ್ದೇನೆ. ನನಗೆ ಹೆಮ್ಮೆ ಅನಿಸುತ್ತದೆ. ಎಲ್ಲರ ಸಹಕಾರ ತೆಗೆದುಕೊಂಡು ನಾನು ಕೆಲಸ ಮಾಡುತ್ತೇನೆ. ಬೆಳಗಾವಿ ಮಹಾನಗರದ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡುತ್ತೇನೆ ಎಂದರು.
ಈ ವೇಳೆ ಸಂಸದೆ ಮಂಗಳಾ ಅಂಗಡಿ, ಶಾಸಕ ಅಭಯ್ ಪಾಟೀಲ್, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಅನಿಲ್ ಬೆನಕೆ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ :ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಶ್ವೇತಾ ಬಿ. ಆಯ್ಕೆ