ಬೆಳಗಾವಿ: ರಾಜ್ಯದಲ್ಲಿ ಇಂದು ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ನಡೆಯಲಿದೆ. ಒಟ್ಟು 28 ಕ್ಷೇತ್ರಗಳ ಪೈಕಿ ಈಗಾಗಲೇ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ಜರುಗಿದೆ. ಇಂದು ಉಳಿದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಇಂದು ಮತದಾನ ಪ್ರಕ್ರಿಯೆ ನಡೆಯುವ ಹಿನ್ನೆಲೆಯಲ್ಲಿ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಭಕ್ತರು ಆಗಮಿಸದೇ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಯಲ್ಲಮ್ಮದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ ಮಹೇಶ ಮನವಿ ಮಾಡಿದ್ದಾರೆ.
ಧಾರ್ಮಿಕ ಆಚರಣೆ ದೇವಸ್ಥಾನಕ್ಕೆ ಮಾತ್ರ ಸೀಮಿತ: ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇಂದು ಸವದತ್ತಿ ಯಲ್ಲಮ್ಮದೇವಿಯ ದರ್ಶನ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿದೆ. ದೇವಿಯ ದರ್ಶನ, ಪೂಜಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಧಾರ್ಮಿಕ ಆಚರಣೆ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿರಲಿದೆ. ಹಾಗಾಗಿ ಭಕ್ತರು ಗುಡ್ಡಕ್ಕೆ ಆಗಮಿಸಬೇಡಿ" ಎಂದು ಕೋರಿದ್ದಾರೆ. ಇದೇ ವೇಳೆ, ಚುನಾವಣೆಯ ಹಿನ್ನೆಲೆಯಲ್ಲಿ ರಜೆ ಇದೆ ಎಂದು ಯಲ್ಲಮ್ಮಗುಡ್ಡಕ್ಕೆ ಹೋದರೆ ನಿಮಗೆ ದೇವಿಯ ದರ್ಶನಕ್ಕೆ ಅವಕಾಶ ಸಿಗುವುದಿಲ್ಲ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಉತ್ತರ ಕರ್ನಾಟಕದ ಶಕ್ತಿದೇವಿ ಪ್ರಸಿದ್ಧಿಯ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತೀ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ. ಅಲ್ಲದೇ ಪ್ರತೀ ಬಾರಿ ಚುನಾವಣೆಯ ಸಂದರ್ಭದಲ್ಲಿ ರಜೆ ಇರುವುದರಿಂದ ಭಕ್ತರ ದಂಡೇ ಗುಡ್ಡಕ್ಕೆ ಹರಿದು ಬರುತ್ತದೆ. ಈ ಬಾರಿ ಮಂಗಳವಾರವೇ ಮತದಾನ ನಡೆಯುತ್ತಿದ್ದು ದೇವಿಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ.